ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಸಾರಿಗೆ ಬಸ್ ಗಳ ಸಂಚಾರ ಅನಿರ್ದಿಷ್ಟಾವಧಿಗೆ ಸ್ತಬ್ಧವಾಗಲಿದ್ದು, ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಲಿದೆ. ಡಿಸೆಂಬರ್ ನಲ್ಲಿ ಮುಷ್ಕರ ಕೈಗೊಂಡಿದ್ದ ವೇಳೆ ನೀಡಿದ್ದ ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಹಿನ್ನಲೆ ನಾಳೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆ ನಾಳೆ ಬಸ್ ಸಿಗದೇ ಪ್ರಯಾಣಿಕರು ಪರದಾಡಬೇಕಾಗುವ ಸಾಧ್ಯತೆ ಹೆಚ್ಚಿದೆ.
ಡಿಸೆಂಬರ್ ತಿಂಗಳಲ್ಲಿ ಸಾರಿಗೆ ನೌಕರರು, ತಮ್ಮನ್ನ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆ ಇಟ್ಟು 4 ದಿನ ಮುಷ್ಕರ ಮುಷ್ಕರ ನಡೆಸಿದ್ದರು. ಆಗ ಸರ್ಕಾರಿ ನೌಕರರ ಬದಲಿಗೆ 6 ನೇ ವೇತನ ಆಯೋಗ ಜಾರಿ ಮಾಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಬೇಡಿಕೆ ಈಡೇರಿಸುವ ಲಿಖಿತ ಭರವಸೆ ನೀಡಿತ್ತು. ಆದರೆ ಕೋವಿಡ್ ಕಾರಣದಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲದ ಕಾರಣ 6 ನೇ ವೇತನ ಆಯೋಗ ಜಾರಿಗೆ ತರಲು ಆಗುವುದಿಲ್ಲ ಎಂದು ಸರ್ಕಾರ ಇದೀಗ ಹಿಂದೇಟು ಹಾಕಿದೆ. ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡಲೇಬೇಕು. ಇಲ್ಲವಾದರೆ ನಾಳೆಯಿಂದ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿ, ಎಲ್ಲಾ ನೌಕರರು ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಮುಷ್ಕರ ಆರಂಭಿಸುತ್ತೇವೆ. ಮುಷ್ಕರದ ವೇಳೆ ನಡೆಯಬಹುದಾದ ಯಾವುದೇ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಬೆಂಗಳೂರಿಗೆ ಬಿಸಿ ತಟ್ಟಲಿದ್ದು, ಬಸ್ಸುಗಳ ಸಂಚಾರ ಸ್ತಬ್ಧವಾಗಲಿದೆ. ಇದರಿಂದ ಪ್ರತಿನಿತ್ಯ ಬೆಂಗಳೂರಲ್ಲಿ ಸಂಚಾರಿಸುತ್ತಿದ್ದ ಪ್ರಯಾಣಿಕರಿಗೆ ಬಾರಿ ತೊಂದರೆಯಾಗಲಿದೆ.










