ನಿಮ್ಮ ಅನುಭವವನ್ನು ದೇಶದ ನಾಲ್ಕು ದಿಕ್ಕುಗಳಿಗೂ ಪಸರಿಸಿ : ಮೋದಿ.

79
firstsuddi

ನವದೆಹಲಿ : ರಾಜ್ಯಸಭೆಯ 72 ಸದಸ್ಯರ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಮಾಡಲಾಯಿತು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಿವೃತ್ತರಾಗುತ್ತಿರುವ ರಾಜ್ಯ ಸಭೆ ಸದಸ್ಯರ ಅನುಭವಗಳು ರಾಷ್ಟ್ರಹಿತಕ್ಕೆ ಬಳಕೆಯಾಗಲಿ. ನಿಮ್ಮ ಅನುಭವವನ್ನು ದೇಶದ ನಾಲ್ಕು ದಿಕ್ಕುಗಳಿಗೂ ಪಸರಿಸಿ. ಮತ್ತೆ ಬನ್ನಿ ಎಂದು ನಾನು ಆಹ್ವಾನ ನೀಡಲು ಬಯಸುತ್ತೇನೆಂದು ಹೇಳಿದ್ದಾರೆ.

ನಾವು ಈ ಸಂಸತ್ತಿನಲ್ಲಿ ಬಹಳ ಸಮಯ ಕಳೆದಿದ್ದೇವೆ. ಈ ಸದನವು ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಈ ಸದನದ ಸದಸ್ಯರಾಗಿ ಸಂಗ್ರಹಿಸಿದ ಅನುಭವವನ್ನು ದೇಶದ ನಾಲ್ಕೂ ದಿಕ್ಕುಗಳಿಗೆ ಕೊಂಡೊಯ್ಯಬೇಕು. ದೇಶವನ್ನು ಮತ್ತಷ್ಟು ಸಬಲಗೊಳಿಸಲು ನಿಮ್ಮ ಅನುಭವಗಳನ್ನು ಧಾರೆ ಎರೆಯಿರಿ. ಲೋಕಸಭೆಗಿಂತ ರಾಜ್ಯಸಭೆ ಭಿನ್ನವಾಗಿದ್ದು, ಇದು ಶಾಶ್ವತ ಸಂಸ್ಥೆಯಾಗಿದ್ದು, ಇದನ್ನು ವಿಸರ್ಜಿಸಲಾಗುವುದಿಲ್ಲ. ಆದರೂ ಎರಡು ವರ್ಷಕ್ಕೊಮ್ಮೆ ರಾಜ್ಯಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತಿಯನ್ನು ಹೊಂದುತ್ತಾರೆ. ಖಾಲಿಯಾದ ಸ್ಥಾನಗಳನ್ನು ಚುನಾವಣೆ ಮತ್ತು ಅಧ್ಯಕ್ಷೀಯ ನಾಮನಿರ್ದೇಶನಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ಬಾರಿ ಒಟ್ಟು 72 ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಅದರಲ್ಲಿ ಏಪ್ರಿಲ್ ನಲ್ಲಿ ಕಾಂಗ್ರೆಸ್ನ ಆನಂದ್ ಶರ್ಮಾ, ಎ.ಕೆ.ಅಂತೋನಿ, ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ, ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡಿದ್ದ ಎಂ.ಸಿ.ಮೇರಿ ಕೋಮ್, ಸ್ವಪನ್ ದಾಸ್ಗುಪ್ತಾ ಸದಸ್ಯತ್ವ ಅವಧಿ ಮುಕ್ತಾಯವಾದರೆ, ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂ.ಜೆ.ಅಕ್ಬರ್, ಜೈರಾಮ್ ರಮೇಶ್, ವಿವೇಕ್ ಟಂಖಾ, ವಿ.ವಿಜಯಸಿ ರೆಡ್ಡಿಯವರು ಜೂನ್ ನಲ್ಲಿ ನಿವೃತ್ತಿಯಾಗಲಿದ್ದಾರೆ. ಹಾಗೇ ಜುಲೈನಲ್ಲಿ ಪಿಯುಷ್ ಗೋಯೆಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿ. ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಸತೀಶ್ ಚಂದ್ರ ಮಿಶ್ರಾ, ಸಂಜಯ್ ರಾವತ್, ಪ್ರಫುಲ್ ಪಟೇಲ್ ಮತ್ತು ಕೆ.ಜೆ. ಅಲ್ಫೋನ್ಸ್ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಳ್ಳಲಿದೆ.