ನಿರ್ಭಯಾ ಅತ್ಯಾಚಾರ ಪ್ರಕರಣದಿಂದ ಹಿಂದೆ ಸರಿದ ಸಿಜೆಐ-ಗಲ್ಲುಶಿಕ್ಷೆ ಇನ್ನಷ್ಟು ವಿಳಂಬ ಸಾಧ್ಯತೆ…

210
firstsuddi

ನವದೆಹಲಿ : ಇಡೀ ದೇಶವನ್ನೇ ನಿಬ್ಬೆರಗಾಗಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ವಿಚಾರಣೆಯಿಂದ ನ್ಯಾ.ಎಸ್.ಎ. ಬೊಬ್ಡೆ ಅವರು ಹಿಂದೆ ಸರಿದಿದ್ದು, ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದು ಇನ್ನಷ್ಟು ವಿಳಂಬವಾಗಲಿದೆ. ನಿರ್ಭಯಾ ಪ್ರಕರಣದಲ್ಲಿ ಸಿಜೆಐ ಎಸ್.ಎ.ಬೋಬ್ಡೆ ಅವರ ಸಹೋದರನ ಪುತ್ರ ಅರ್ಜುನ್ ಬೋಬ್ಡೆ ಸಂತ್ರಸ್ತೆಯ ತಾಯಿ ಪರವಾಗಿ ವಾದ ಮಂಡಿಸಿದ್ದರು. ಹೀಗಾಗಿ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಈ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲುಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿ ಅಕ್ಷಯ್ ಕುಮಾರ್ ಸಿಂಗ್ ಎಂಬುವವರು ಸಲ್ಲಿಸಿದ್ದ ಮರುಪರಶೀಲನಾ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ.ಎಸ್.ಎ.ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಗೆ ಹೊಸ ಪೀಠ ರಚಿಸುವಂತೆ ಹೇಳಿ ವಿಚಾರಣೆಯನ್ನು ನಾಳೆ ಬೆಳಿಗ್ಗೆ 10:30ಕ್ಕೆ ಮುಂದೂಡಿದೆ.