ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಮುಂದೂಡಿಕೆಯಾಗುವ ಸಾಧ್ಯತೆಯಿದ್ದು, ಆರೋಪಿ ಮುಖೇಶ್ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಆರೋಪಿಗಳಿಗೆ ಜ.22ರಂದು ಗಲ್ಲಿಗೇರಿಸಲು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳಾದ ಮುಖೇಶ್ ಹಾಗೂ ವಿನಯ್ ಶರ್ಮಾ ಸುಪ್ರೀಂ ಕೋರ್ಟ್‍ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠ ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿತ್ತು. ಈ ಅರ್ಜಿ ವಜಾಗೊಳ್ಳುತ್ತಿದ್ದಂತೆ ಆರೋಪಿ ಮುಖೇಶ್ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದು, ಅಲ್ಲದೇ ರಾಷ್ಟ್ರಪತಿಗಳಿಗೆ ನೀಡಿದ ನನ್ನ ಅರ್ಜಿ ಇನ್ನು ಇತ್ಯರ್ಥಗೊಂಡಿಲ್ಲ. ನನ್ನ ಅರ್ಜಿ ಇತ್ಯರ್ಥವಾಗದೆ ಡೆತ್ ವಾರೆಂಟ್ ಜಾರಿಯಾಗುವುದು ಸರಿಯಲ್ಲ ಎಂದು ಹೇಳಿದ್ದಾರೆ. ಹೀಗಾಗಿ ದೆಹಲಿ ಸರ್ಕಾರ ನಾವು ನಿಯಮಗಳಿಗೆ ಅನುಗುಣವಾಗಿಯೇ ಕೆಲಸ ಮಾಡಬೇಕು. ರಾಷ್ಟ್ರಪತಿಗಳಿಗೆ ನೀಡಿರುವ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಆರೋಪಿಗಳನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್‍ಗೆ ತಿಳಿಸಿದೆ.










