ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನ ಭೀಕರ ಹತ್ಯೆ.

89
firstsuddi

ಮುಂಬೈ : ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಜೂನ್ 21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ರೀತಿಯಲ್ಲೇ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ (54) ಕೊಲೆಯಾದ ವ್ಯಕ್ತಿ. ಉಮೇಶ್ ಕೋಲ್ಹೆ ಅವರು ಜೂನ್ 21 ರಂದು ರಾತ್ರಿ 10:30ರ ಸುಮಾರಿಗೆ ಮೆಡಿಕಲ್ ಸ್ಟೋರ್ ಅನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದರು. ಇನ್ನೊಂದು ಬೈಕ್ ನಲ್ಲಿ ಆತನ ಪತ್ನಿ ಮತ್ತು ಮಗನು ಇದ್ದರು. ಮಹಿಳಾ ಕಾಲೇಜು ಪ್ರೌಢಶಾಲೆಯ ಗೇಟ್ ಬಳಿ ಬೈಕ್ ನಲ್ಲಿ ಮೂವರು ದುಷ್ಕರ್ಮಿಗಳು ಉಮೇಶ್ ನನ್ನು ಅಡ್ಡಗಟ್ಟಿದರು. ಅವರಲ್ಲಿ ಒಬ್ಬಾತ ಉಮೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅಲ್ಲೇ ಇದ್ದ ಉಮೇಶ್ ನ ಪತ್ನಿ ಮತ್ತು ಮಗ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್ ನನ್ನು  ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಉಮೇಶ್ ಕೋಲ್ಹೆ ಅವರ ಪುತ್ರ ನೀಡಿದ ದೂರಿನ ಆಧಾರದ ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22) ಎಂಬುವವರನ್ನು ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಶಾಮೀಲಾಗಿದ್ದ ಹಮೀಮ್ ಅಹ್ಮದ್ ಫಿರೋಜ್ ಅಹ್ಮದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿ ಇರ್ಫಾನ್ ಖಾನ್ ಕೊಲ್ಹೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಅದಕ್ಕಾಗಿ ಐದು ಜನ ದುಷ್ಕರ್ಮಿಗಳಿಗೆ ತಲಾ 10 ಸಾವಿರ ರೂಪಾಯಿ ನೀಡಿದ್ದ. ಮತ್ತು ಕೊಲೆ ಬಳಿಕ ಸುರಕ್ಷಿತವಾಗಿ ಕಾರಿನಲ್ಲಿ ಪರಾರಿಯಾಗಲು ನೆರವಾಗಿದ್ದ ಎನ್ನಲಾಗಿದೆ.

ಕೊಲೆಯಾದ ಉಮೇಶ್ ನೂಪುರ್ ಶರ್ಮಾ ಅವರ ಹೇಳಿಕೆಗೆ ಬೆಂಬಲವಾಗಿ ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ತಮ್ಮ ಗ್ರಾಹಕರು ಸೇರಿದಂತೆ ಕೆಲವು ಮುಸ್ಲಿಮರು ಸಹ ಸದಸ್ಯರಾಗಿರುವ ವಾಟ್ಸಾಪ್ ಗುಂಪಿನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದು ಅವರ ಕೊಲೆಗೆ ಕಾರಣವಾಗಿರಬಹುದು ಎಂದು ಸಿಟಿ ಕೊತ್ವಾಲಿ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.