ಮಂಡ್ಯ : ನೇಣು ಬಿಗಿದ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದ್ದು, ಬಾಲಕಿ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಪೋಷಕರು ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಕಳೆದ 15 ದಿನಗಳ ಹಿಂದೆ ಹೊಟ್ಟೆ ನೋವಿನ ಕಾರಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ತಾಯಿ ಕರೆದೊಯ್ದಿದ್ದರು. ವೈದ್ಯಕೀಯ ಪರೀಕ್ಷೆ ಬಳಿಕ ಬಾಲಕಿ ಗರ್ಭಿಣಿ ಎಂಬುದನ್ನು ವೈದ್ಯರು ಧೃಡಪಡಸಿದ್ದರು. ತನ್ನ ಮಗಳು ಗರ್ಭಿಣಿ ಎಂಬ ವಿಚಾರ ತಿಳಿದು ತಾಯಿ ಕೂಡ ಕುಸಿದು ಬಿದ್ದಿದ್ದರು. ಬಳಿಕ ಪಕ್ಕದ ಮನೆಯ ನಿವಾಸಿ ಪರಮೇಶ್(50) ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ ಕುರಿತು ತಾಯಿ ಬಳಿ ಅಪ್ರಾಪ್ತ ಮಗಳು ಹೇಳಿಕೊಂಡಿದ್ದಳಂತೆ. ಆದರೆ ಆರೋಪಿ ಸವರ್ಣೀಯ ಎಂಬ ಕಾರಣಕ್ಕೆ ಹಾಗೂ ಮರ್ಯಾದೆಗೆ ಹೆದರಿ ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ತಾಯಿ ಗುರುವಾರ ರಾತ್ರಿ ಕೆಲಸದಿಂದ ವಾಪಾಸ್ಸಾದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದೆ. ಇತ್ತ ಮೃತ ಬಾಲಕಿಯ ಕುಟುಂಬಸ್ಥರು ತನ್ನ ಮಗಳ ಮೇಲೆ ಪರಮೇಶ್ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ವಿಚಾರ ಬೆಳಕಿಗೆ ಬಂದರೆ, ತಾನು ತಪ್ಪಿತಸ್ಥ ಆಗ್ತೀನಿ ಎಂಬ ಭಯದಿಂದ ಮಗಳನ್ನ ಕೊಲೆ ಮಾಡಿದ್ದಾನೆ ಎಂದು ಪರಮೇಶ್ ವಿರುದ್ಧ ಆರೋಪಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










