ಕಠ್ಮಂಡು : ನೆರೆರಾಷ್ಟ್ರ ನೇಪಾಳದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ ಒಟ್ಟು 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, ಒಬ್ಬ ಐರಿಶ್, 2 ಕೊರಿಯನ್ನರು, 1 ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ವಿಮಾನವು ಕಠ್ಮಂಡುವಿನಿಂದ ಪೋಖ್ರಾಗೆ ತೆರಳುತ್ತಿತ್ತು. ನಿನ್ನೆ ಬೆಳಗ್ಗೆ 10:33ಕ್ಕೆ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಿತ್ತು. ವಿಮಾನವು ಟೇಕ್ ಆಫ್ ಆದ ಸುಮಾರು 20 ನಿಮಿಷಗಳಲ್ಲೇ ಅಪಘಾತ ಸಂಭವಿಸಿದೆ.
ಭಾರತೀಯರಾದ ಅಭಿಷೇಕ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್ಭರ್ , ಸೋನು ಜೈಸ್ವಾಲ್, ಸಂಜಯ್ ಜೈಸ್ವಾಲ್ ಸಜೀವ ದಹನಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಗೃಹ ಸಚಿವ ರಬಿ ಲಮಿಚಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಯೇತಿ ಏರ್ಲೈನ್ಸ್ ವಿಮಾನ ದುರಂತದ ಕುರಿತು ತನಿಖೆ ನಡೆಸಲು 5 ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಗಿದೆ.










