ಬೆಳಗಾವಿ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆಸರು ಕೇಳಿ ಬಂದಿರುವ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿರುವ ಲಖನ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಲ್ಲಿ ಯುವತಿ ತಂದೆ ತಾಯಿ ಡಿಕೆಶಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಇದು ನಿಜಾನೆ ಇರಬೇಕು ಅನಿಸುತ್ತಿದೆ. ಹಾಗಾಗಿ ಡಿ .ಕೆ ಶಿವಕುಮಾರ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಸಂತ್ರಸ್ತ ಯುವತಿಯ ಪೋಷಕರು ಡಿ.ಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿರುವ ಹಿನ್ನಲೆ ರಮೇಶ್ ಹೇಗೆ ರಾಜೀನಾಮೆ ನೀಡಿದರೋ ಹಾಗೇ ಡಿಕೆಶಿ ಕೂಡ ರಾಜೀನಾಮೆ ನೀಡಲಿ. ಈ ಬಗ್ಗೆ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿ ಕೂಡಲೇ ರಾಜೀನಾಮೆ ನೀಡಿಸಿದರೆ, ಚುನಾವಣೆಯಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಇದು ಮೂರು ಕ್ಷೇತ್ರಗಳ ಉಪಚುನಾಣೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿಯವರು ಜಲಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇದೀಗ ಅವರ ವಿರುದ್ಧ ಇಂತಹ ಪಿತೂರಿ ನಡೆಸಿರುವುದು ದುರಾದೃಷ್ಟಕರ ಸಂಗತಿ. ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಅನ್ನೋದೇ ಇದೀಗ ಗೊಂದಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.










