ಪಂಚಭೂತಗಳಲ್ಲಿ ಲೀನರಾದ ಪ್ರಧಾನಿ ಮೋದಿ ತಾಯಿ ಹೀರಾಬೆನ್.

71
firstsuddi

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಹೀರಾಬೆನ್ ಮೋದಿ ಅವರು ಇಂದು ಮುಂಜಾನೆ ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಾಯಿಯ ಅಗಲಿಕೆ ಸುದ್ದಿ ತಿಳಿಯುತಿದ್ದಂತೆಯೇ ಅಹಮದಾಬಾದ್ ಗೆ ತೆರಳಿದ್ದ ಪ್ರಧಾನಿ ಮೋದಿ ತಮ್ಮ ತಾಯಿಯ ಅಂತಿಮ ದರ್ಶನ ಪಡೆದಿದ್ದರು. ಬಳಿಕ ಪ್ರಧಾನಿ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಹೆಗಲು ಕೊಟ್ಟಿದ್ದರು.

ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥಿವ ಶರೀರ ಅಂತಿಮ ಯಾತ್ರೆ ಹೊರಡಲಾಗಿತ್ತು. ಇಂದು ಬೆಳಗ್ಗೆ 9:30ರ ವೇಳೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅಂತ್ಯಕ್ರಿಯೆ ನಡೆದಿದೆ. ಹೀರಾಬೆನ್ ಚಿತೆಗೆ ಮೋದಿ ಸಹೋದರರು ಅಗ್ನಿಸ್ಪರ್ಶ ಮಾಡಿದ್ದಾರೆ.

ತಮ್ಮ ತಾಯಿಯ ನಿಧನದ ಬಗ್ಗೆ ಇಂದು ಮುಂಜಾನೆ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭವ್ಯವಾದ ಶತಮಾನವೊಂದನ್ನು ಕಳೆದ ನನ್ನ ತಾಯಿ ದೇವರ ಪಾದದ ಮೇಲೆ ಮಲಗಿದ್ದಾರೆ. ಅಮ್ಮನಲ್ಲಿ ನಾನು ಯಾವಾಗಲೂ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅವರದ್ದು ತಪಸ್ವಿಯ ಪ್ರಯಾಣ. ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ನಡೆಸಿದ ನನ್ನ ತಾಯಿ ನಮ್ಮನ್ನು ಅಗಲಿದ್ದಾರೆ. ಅಮ್ಮನ 100ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ ಬುದ್ಧಿವಂತಿಕೆಯಿಂದ ಕೆಲಸ ಮಾಡು, ಶುದ್ಧತೆಯಿಂದ ಜೀವನ ನಡೆಸು ಎಂದು ನನಗೆ ಹೇಳಿದ್ದರು ಎಂದಿದ್ದಾರೆ.