ಆಂಧ್ರಪ್ರದೇಶ : ಪಕ್ಕದ ಮನೆ ಮಹಿಳೆಯೊಬ್ಬರ ಮೇಲೆ ಪತಿಯೇ ಅತ್ಯಾಚಾರ ಎಸಗುತ್ತಿದ್ದರೆ, ಇತ್ತ ಪತ್ನಿ ಆ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ ವಿಚಿತ್ರ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಸಂತ್ರಸ್ತೆಯ ಗಂಡ ಕೇಟರಿಂಗ್ ವ್ಯಾಪಾರ ಮಾಡುತ್ತಿದ್ದಾರೆ. ಈ ತಿಂಗಳು 3ನೇ ತಾರೀಖಿನಂದು ರಾತ್ರಿ ಸಂತ್ರಸ್ತೆ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ 11 ಗಂಟೆಯ ಸುಮಾರು ಎದುರು ಮನೆಯ ದಿಲೀಪ್ ಮತ್ತು ತುಳಸಿ ದಂಪತಿ ಸಂತ್ರಸ್ತೆಯ ಮನೆಗೆ ನುಗ್ಗಿ ತಮ್ಮ ಮನೆಗೆ ಎಳೆದೊಯ್ದಿದ್ದಾರೆ.
ಬಳಿಕ ಸಂತ್ರಸ್ತೆಯ ಮೇಲೆ ಆರೋಪಿ ದಿಲೀಪ್ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಎಸಗುತ್ತಿರುವ ದೃಶ್ಯಗಳು ಮತ್ತು ಫೋಟೋಗಳನ್ನು ತುಳಸಿ ತನ್ನ ಫೋನ್ ಮೂಲಕ ಚಿತ್ರೀಕರಿಸಿದ್ದಾಳೆ. ಫೋಟೋಗಳು ಮತ್ತು ವಿಡಿಯೋ ತೋರಿಸಿ ಸಂತ್ರಸ್ತೆಯ ಮೇಲೆ ದಿಲೀಪ್ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಅಷ್ಟೇ ಅಲ್ಲ, ತನ್ನ ಸ್ನೇಹಿತರ ಕೋರಿಕೆಯನ್ನೂ ಈಡೇರಿಸಬೇಕೆಂದು ಹೇಳಿದ್ದಾನೆ.
ಇದರಿಂದ ವಿಚಲಿತಳಾದ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ದಂಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.










