ಚೆನ್ನೈ: ಇಡೀ ದೇಶ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದರೆ ಪರಿಸರ ಹೋರಾಟಗಾರರ ‘ಪಟಾಕಿ ನಿಷೇಧದ ಅಭಿಯಾನದ ನಡುವೆಯೇ ತಮಿಳುನಾಡು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಇದಕ್ಕೆ ವ್ಯತಿರಿಕ್ತವಾಗಿ ಸಾಕಷ್ಟು ಪಟಾಕಿ ಹೊಡೆಯುವಂತೆ ಕರೆ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕಾಗಿ ಕಾರ್ಯಕರ್ತರು ಮತ್ತು ಜನತೆಯನ್ನು ಉದ್ದೇಶಿಸಿ ಆಡಿಯೋ ಸಂದೇಶ ನೀಡಿರುವ ಕೆ.ಅಣ್ಣಾಮಲೈ, ಪಟಾಕಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿಯಂದು ಸಾಕಷ್ಟು ಪ್ರಮಾಣದಲ್ಲಿ ಪಟಾಕಿಗಳನ್ನು ಖರೀದಿಸಿ, ಸಿಡಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಈ ವಿಷಯದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿರುವ ಅವರು, ಪಟಾಕಿಗಳನ್ನು ಸಿಡಿಸುವ ಅಗತ್ಯವನ್ನು ವಿವರಿಸಿದ್ದು, ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತ 125ನೇ ಸ್ಥಾನದಲ್ಲಿದೆ, ಯುಎಸ್ 16 ಮತ್ತು ಚೀನಾ 25ನೇ ಸ್ಥಾನದಲ್ಲಿವೆ. ಆದರೆ ನಾವು ಕೇವಲ ಒಂದು ದಿನ ಪಟಾಕಿ ಸಿಡಿಸುವುದನ್ನು ಪ್ರಮುಖ ವಿಷಯವಾಗಿ ಚರ್ಚಿಸುತ್ತಿದ್ದೇವೆ. ಸುಮಾರು 8 ಲಕ್ಷ ಜನ ನೇರವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಉದ್ಯಮದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ನಮ್ಮ ಸಂತೋಷಕ್ಕಾಗಿ ಸಾಕಷ್ಟು ಸವಾಲುಗಳ ನಡುವೆ ಪಟಾಕಿಗಳನ್ನು ತಯಾರಿಸುತ್ತಾರೆ. ನಾವು ಅವರ ಸಂತೋಷಕ್ಕಾಗಿ ಪಟಾಕಿಗಳನ್ನು ಖರೀದಿಸಿ ಏಕೆ ಸಿಡಿಸಬಾರದು’ ಎಂದು ಪ್ರಶ್ನಿಸಿದ್ದಾರೆ.










