ತಿರುವನಂತಪುರಂ : ಪತಿಯ ಮನೆಯಲ್ಲಿ ನೇಣು ಬಿಗಿದುಕೊಂಡು 24 ವರ್ಷದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟಾ ಬಳಿಯ ಸಾಸ್ತಮ್ನಾಡದಲ್ಲಿ ನಡೆದಿದ್ದು, ಸಾವನ್ನಪ್ಪಿದ 24 ವರ್ಷದ ಯುವತಿಯನ್ನು ವಿಸ್ಮಯ.ವಿ.ನೈಯರ್ ಎಂದು ಗುರುತಿಸಲಾಗಿದೆ.
ನಿನ್ನೆ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಇದಕ್ಕೂ ಮುನ್ನ ತನಗೆ ಗಂಡನ ಮನೆಯವರು ನೀಡಿದ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ 2020ರ ಮೇ ತಿಂಗಳಲ್ಲಿ ಮೋಟಾರು ವಾಹನ ಇಲಾಖೆಯ ಅಧಿಕಾರಿ ಎಸ್.ಕಿರಣ್ಕುಮಾರ್ ಜೊತೆ ವಿವಾಹವಾಗಿದ್ದರು.
ಮಗಳ ಸಾವಿಗೆ ಆಕೆಯ ಪತಿಯೇ ಕಾರಣ, ಮದುವೆ ಸಮಯದಲ್ಲಿ ಒಂದು ಎಕರೆ ಭೂಮಿ, ಒಂದು ಕಾರನ್ನು ನೀಡಲಾಗಿದೆ. ಆದರೂ ಅಳಿಯನ ಹಣದಾಹ ಕಡಿಮೆಯಾಗಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಆರೋಪಿ ಕಿರಣ್ ಕುಮಾರ್ ನನ್ನು ಬಂಧಿಸಲಾಗಿದೆ.










