ಪತ್ನಿ, ಸೋದರಳಿಯನಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಎಸಿಪಿ.

83
firstsuddi

ಮುಂಬೈ: ಸಹಾಯಕ ಪೊಲೀಸ್ ಕಮಿಷನರ್ ರೊಬ್ಬರು ಪತ್ನಿ ಹಾಗೂ ಸೋದರಳಿಯನಿಗೆ ಗುಂಡು ಹಾರಿಸಿ ಹತ್ಯೆಗೈದು ಬಳಿಕ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಮೃತರನ್ನು ಪೊಲೀಸ್ ಸಹಾಯಕ ಕಮಿಷನರ್ ಭರತ್ ಗಾಯಕ್ವಾಡ್ (54), ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ. ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ ನಿಯೋಜಿಸಲಾಗಿತ್ತು.

ಎಸಿಪಿ ಭರತ್ ಗಾಯಕ್ವಾಡ್ ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ. ಬಂದೂಕಿನಿಂದ ಬಂದ ಸ್ಫೋಟದ ಸದ್ದಿಗೆ ಎಸಿಪಿ ಮಗ ಹಾಗೂ ಸೋದರಳಿಯ ಪಕ್ಕದ ರೂಮ್‍ನಿಂದ ಎದ್ದು ಬಂದಿದ್ದಾರೆ. ಈ ವೇಳೆ ಸೋದರಳಿಯ ದೀಪಕ್ ನ ಮೇಲೂ ಗುಂಡು ಹಾರಿಸಿದ್ದಾರೆ. ದೀಪಕ್ ಎದೆಗೆ ಗುಂಡು ತಗುಲಿದ್ದು, ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಘಟನೆಯ ಹಿಂದಿನ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಘಟನೆಯ ಕಾರಣ ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಚತುಃಶೃಂಗಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.