ಪತ್ರಕರ್ತರಿಗೆ ಲಂಚ ಆರೋಪ ; ಸಿಎಂ ಬೊಮ್ಮಾಯಿ ರಾಜೀನಾಮೆ ನೀಡುವಂತೆ ಸುರ್ಜೇವಾಲಾ ಆಗ್ರಹ…

48
firstsuddi

ನವದೆಹಲಿ : ಪತ್ರಕರ್ತರಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡಿದ್ದಾರೆ. ಆದರೆ ಸಿಎಂ ಕಚೇರಿ ಲಂಚ ಗುಳಿತನವನ್ನು ಪತ್ರಕರ್ತರು ಬಯಲು ಮಾಡಿದ್ದಾರೆ. ಪತ್ರಕರ್ತರಿಗೆ ಲಂಚ ನೀಡಲು ಹಣ ಎಲ್ಲಿಂದ ಬಂತು?. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲ ಅವರು, ಭಾರತದಲ್ಲಿ ಕರ್ನಾಟಕವೇ ಅತಿ ದೊಡ್ಡ ಭ್ರಷ್ಟಾಚಾರ ಸರ್ಕಾರ. ನೇಮಕಾತಿಯಲ್ಲಿ, ಗುತ್ತಿಗೆಯಲ್ಲಿ, ವರ್ಗಾವಣೆಯಲ್ಲಿ ಎಲ್ಲ ಕಡೆ ಸಿಎಂ ಕಚೇರಿ ಲಂಚ ಪಡೆಯುತ್ತಿದೆ. 40% ಕಮಿಷನ್ ಪಡೆದು ಕೆಲಸ ಮಾಡುತ್ತಿದೆ. ಮಠಗಳಿಗೂ ಅನುದಾನ ನೀಡುವಲ್ಲೂ ಸರ್ಕಾರ ಕಮಿಷನ್ ಪಡೆದಿದೆ. ಅಧಿಕಾರಿಗಳು/ಉಪನ್ಯಾಸಕರ ನೇಮಕಾತಿಯಲ್ಲೂ ಲಂಚ ಪಡೆದಿರುವುದು ಬಯಲಾಗಿದೆ. ಲಂಚ ಪಡೆದು ಪೊಲೀಸ್ ಉನ್ನತ ಅಧಿಕಾರಿಗಳು ಜೈಲು ಸೇರಿದ್ದಾರೆ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಸರ್ಕಾರ ಲಂಚ ಪಡೆದಿದೆ. ಈ ಹಣ ಎಲ್ಲಿ ಹೋಗುತ್ತಿದೆ ಮಿಸ್ಟರ್ ಬೊಮ್ಮಾಯಿ? ಪತ್ರಕರ್ತರಿಗೆ ಲಂಚ ನೀಡಲು ಹಣ ಎಲ್ಲಿಂದ ಬಂತು? ಸಿಎಂ ಬೊಮ್ಮಾಯಿ ಲಂಚಾವತಾರ ಬಯಲಾಗಿದೆ. ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮೇಕೆದಾಟು ಯಾತ್ರೆ ಮತ್ತು ಭಾರತ್ ಜೋಡೊ ಯಾತ್ರೆಯಲ್ಲಿ ಪತ್ರಕರ್ತರಿಗೆ ಕಾಂಗ್ರೆಸ್ ಹಣ ನೀಡಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಎಂದೂ ಪತ್ರಕರ್ತರಿಗೆ ಹಣ ನೀಡಿಲ್ಲ. ನಾನು ಈ ಆರೋಪವನ್ನು ತಿರಸ್ಕರಿಸುತ್ತೇನೆ. ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುತ್ತಿದೆ. ಈ ರೀತಿಯ ರಾಜಕೀಯ ಮಾಡಿ ಅಶಾಂತಿ ಹುಟ್ಟಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ರಾಜ್ಯದ ಕೆಲವು ಆಯ್ದ ಪತ್ರಕರ್ತರಿಗೆ ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆಯಾಗಿ ಸಿಹಿತಿಂಡಿಗಳ ಜೊತೆಗೆ ತಲಾ 2.5 ಲಕ್ಷ ರೂಪಾಯಿ ನಗದು ನೀಡಿರುವ ಆರೋಪ ಕೇಳಿಬಂದಿತ್ತು.