ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣ : ಸಂಜಯ್ ರಾವತ್ ಬಂಧಿಸಿದ ಇಡಿ…

62
firstsuddi

ಮುಂಬೈ : ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಅವರನ್ನು ನಿನ್ನೆ ತಡರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂದು ಮುಂಬೈನ ವಿಶೇಷ ಪಿಎಂಎಲ್ ಎ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜಾರಿ ನಿರ್ದೇಶನಾಲಯವು ತನ್ನ ಕಸ್ಟಡಿಗೆ ಪಡೆಯಲಿದೆ ಎಂದು ತಿಳಿದು ಬಂದಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು.

ಜು.1ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿ ದಾಖಲಿಸಿಕೊಂಡಿತ್ತು. ಕಳೆದ ಏಪ್ರಿಲ್ ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವುತ್ ಅವರ ಪತ್ನಿ ವರ್ಷಾ ರಾವುತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ನಾನು ಶಿವಸೇನೆಯನ್ನು ಬಿಡುವುದಿಲ್ಲ. ನಾನು ಸತ್ತರೂ ಶರಣಾಗುವುದಿಲ್ಲ. ಯಾವುದೇ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ದಿವಂಗತ ಬಾಳಾಸಾಬೇಬ್ ಠಾಕ್ರೆಯವರ ಮೇಲೆ ಪ್ರಮಾಣ ಮಾಡುತ್ತೇನೆ. ಬಾಳಾಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ಸಂಜಯ್ ರಾವತ್ ನಿನ್ನೆ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರ ಬಂಧನವಾಗಿದೆ.