ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ನಿಧನ…

72
firstsuddi

ಪುಣೆ : ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದರು. ಸಿಂಧೂತಾಯಿ ಸಪ್ಕಾಲ್(74) ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 8.10ಕ್ಕೆ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಿಂಧು ತಾಯಿ ಸಪ್ಕಾಲ್ ಅವರು 1948ರ ನವೆಂಬರ್ 14ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಹುಟ್ಟಿದ್ದಾರೆ. ಬಾಲ್ಯವಿವಾಹಕ್ಕೆ ಒಳಗಾಗಿದ್ದ ಸಿಂಧುತಾಯಿ ಸಪ್ಕಾಲ್, 20ನೇ ವಯಸ್ಸಿಗೆ 4ನೇ ಬಾರಿ ತಾಯಿಯಾಗಿದ್ದ ಅವರನ್ನು ಗಾಳಿ ಸುದ್ದಿ ಕೇಳಿ ಅವರ ಗಂಡ ಮನೆಯಿಂದ ಹೊರಹಾಕಿದ್ದರು. ನಂತರ ತನ್ನ ತಾಯಿ ಮನೆಗೆ ತೆರಳಿದರೂ, ಅಲ್ಲಿಯೂ ಇವರಿಗೆ ಉಳಿಯಲು ಅವಕಾಶ ಸಿಗದೇ ತಿರಸ್ಕಾರಕ್ಕೆ ಒಳಪಟ್ಟರು.ಆದರೆ ಇದೆಲ್ಲ ಕಷ್ಟಗಳನ್ನು ಎದುರಿಸಿ, ತಮ್ಮದೇ ದಾರಿ ಕಂಡುಕೊಂಡರು. ತಮ್ಮ ಜೀವನವನ್ನೆಲ್ಲಾ ಅನಾಥ ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದ ಅವರೂ ತಾವೂ ದತ್ತು ತೆಗೆದುಕೊಂಡ ಮಕ್ಕಳನ್ನೆಲ್ಲಾ ಓದಿಸಿ, ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಟ್ಟಿದ್ದಾರೆ.

ಸಿಂಧುತಾಯಿ ಅವರ ಸಾಮಾಜಿಕ ಸೇವೆಗಾಗಿ ಹಲವು ಪದ್ಮಶ್ರೀ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ 270ಕ್ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ. 2010ರಲ್ಲಿ ಮಿ ಸಿಂಧುತಾಯಿ ಸಪ್ಕಾಲ್ ಎಂದ ಇವರ ಜೀವನಾಧಾರಿತ ಮರಾಠಿ ಸಿನಿಮಾ ಕೂಡ ಬಿಡುಗಡೆಯಾಗಿತ್ತು.

ಸಿಂಧೂತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿಯವರು ಡಾ.ಸಿಂಧೂತಾಯಿ ಸಪ್ಕಲ್ ಅವರು ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಗಾಗಿ ಸ್ಮರಣೀಯರು. ಅವರ ಪ್ರಯತ್ನದಿಂದಾಗಿ, ಅನೇಕ ಮಕ್ಕಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಿದ್ದರೆ. ಅವರ ನಿಧನದ ಸುದ್ದಿಯಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.