ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ಅಪ್ಪನನ್ನೇ ಕೊಂದ ಬಾಲಕ!

65
firstsuddi

ಭೋಪಾಲ್ : 15ವರ್ಷದ ಬಾಲಕನೊಬ್ಬ ತಾನು ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ. ಇದರಿಂದ ನನ್ನ ತಂದೆ ಹೊಡೆಯುತ್ತಾರೆ ಎಂಬ ಭಯದಿಂದ ತಂದೆಯನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ದುಳಿಚಾಂದ್ ಅಹಿರ್ವಾರ್ ಮೃತ ವ್ಯಕ್ತಿ. ಏಪ್ರಿಲ್ 3 ರಂದು ಕೋಣೆಯಲ್ಲಿ ಮಲಗಿದ್ದಾಗ ದುಲಿಚಂದ್ ಅಹಿರ್ವಾರ್ ಅವರನ್ನು ಬಾಲಕ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ.

ಬಳಿಕ ಪುತ್ರನೇ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಪಕ್ಕದ ಮನೆಯವನಾದ ವೀರೇಂದ್ರ ಅಹಿರ್ವಾರ್ ಮತ್ತು ಇನ್ನೊಬ್ಬಾತ ಓಡಿಹೋಗಿದ್ದನ್ನು ನಾನು ನೋಡಿದೆ ಎಂದೂ ದೂರಿನಲ್ಲಿ ತಿಳಿಸಿದ್ದ. ಈ ವೀರೇಂದ್ರ ಮತ್ತು ಬಾಲಕನ ಮನೆಯ ನಡುವೆ ಭಿನ್ನಾಭಿಪ್ರಾಯವಿತ್ತು. ಆಗಾಗ ಜಗಳವಾಗುತ್ತಿತ್ತು. ಅದನ್ನು ಸದ್ಬಳಕೆ ಮಾಡಿಕೊಂಡು, ತಾನು ಪಾರಾಗುವ ಪ್ರಯತ್ನ ಇವನದಾಗಿತ್ತು. ಆದರೆ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಕೈವಾಡ ಈ ಕೊಲೆಯಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಬಳಿಕ ಬಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮನೆಯಿಂದ ಹೊರಗೆ ಹಾಕುವುದಾಗಿ ತನ್ನ ತಂದೆ ಬೆದರಿಕೆ ಹಾಕಿದ್ದರು, ಅಲ್ಲದೇ ಓದಿಲ್ಲ ಅಂದರೆ ಗದರಿಸುತ್ತಿದ್ದರು ಎಂದು ಬಾಲಕ ಹೇಳಿದ್ದಾನೆ.

ಈ ಬಾರಿ ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿರಲಿಲ್ಲ. ಹೀಗಾಗಿ ಫೇಲ್ ಆಗುತ್ತೇನೆ ಎಂಬ ಭಯವಿದ್ದರಿಂದ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಸತ್ಯ ಬಹಿರಂಗಪಡಿಸಿದ್ದಾನೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.