ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧನ…

70
firstsuddi

ಕೋಲ್ಕತ್ತಾ : ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.

ಪ್ರಸ್ತುತ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆದೊಯ್ಯಲಾಗಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಚಟರ್ಜಿ ಅವರನ್ನು ಅವರ ಮನೆಯಲ್ಲಿಯೇ ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

ಪ್ರಸ್ತುತ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (WBSSC) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಿರುವುದಾಗಿ ಆರೋಪಿಸಲಾಗಿದೆ.

ನಿನ್ನೆ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ನಡೆಸಿ, 20 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು. ಮುಟ್ಟುಗೋಲು ಹಾಕಿಕೊಂಡಿರುವ ಹಣವು ಹಗರಣಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ.

ಇನ್ನೂ ಇಡಿ ದಾಳಿ ವೇಳೆ ಅರ್ಪಿತಾ ಮುಖರ್ಜಿ ಅವರ ಮನೆಯ ಆವರಣದಲ್ಲಿ 20ಕ್ಕೂ ಹೆಚ್ಚು ಮೊಬೈಲ್ ಫೋನ್ ಗಳು ಸಿಕ್ಕಿದ್ದವು. ಇಷ್ಟೊಂದು ಮೊಬೈಲ್ ಫೋನ್ ಏಕೆ ಹೊಂದಿದ್ದರು? ಯಾವ ಉದ್ದೇಶಕ್ಕೆ ಬಳಸುತ್ತಿದ್ದರು ಎನ್ನುವ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.