ಇಸ್ಲಾಮಾಬಾದ್ : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಾಸ ಮತ ಗಳಿಸಲು ವಿಫಲವಾದ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಅಸೆಂಬ್ಲಿಯಿಂದ 174 ಮತಗಳನ್ನು ಗಳಿಸಿ ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದರು.
ಯಾರಿದು ಶೆಹಬಾಜ್?: ಶೆಹಬಾಜ್ ಷರೀಫ್ ಅವರು ಮೂರು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 1990ರಲ್ಲಿ ಪಾಕ್ ರಾಷ್ಟ್ರೀಯ ಸಂಸತ್ತು ಪ್ರವೇಶ ಮಾಡಿದ ಇವರು, ಭ್ರಷ್ಟಾಚಾರ ಆರೋಪ ಹೊತ್ತು ಬಳಿಕ ಸೌದಿ ಅರೇಬಿಯಾಕ್ಕೆ ಗಡಿಪಾರಾಗಿದ್ದರು. 2007ರಲ್ಲಿ ಪಾಕಿಸ್ತಾನಕ್ಕೆ ವಾಪಸ್ ಆಗಿ, ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಭಾವಿ ಉಕ್ಕು ಉದ್ಯಮಿಯಾಗಿರುವ ಇವರು, ಇದೀಗ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಮಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ನೆರಳು ಇಲ್ಲದೇ, ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.










