ಪುಣೆ : ಮುಂಡ್ವಾ ಪ್ರದೇಶದ ಬಹುಮಹಡಿ ವಾಣಿಜ್ಯ ಕಟ್ಟಡದ 11ನೇ ಮಹಡಿಯಲ್ಲಿರುವ ಗೂಗಲ್ ಕಚೇರಿಗೆ ನಿನ್ನೆ ತಡ ರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಹೈದರಾಬಾದ್ ನಲ್ಲಿ ಇಂದು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಹೈದರಾಬಾದ್ ಮೂಲದ ಪನಯಂ ಶಿವಾನಂದ್ ಎಂದು ಗುರುತಿಸಲಾಗಿದ್ದು, ಮದ್ಯದ ಅಮಲಿನಲ್ಲಿ ಬೆದರಿಕೆ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬೆದರಿಕೆ ಕರೆ ಬಗ್ಗೆ ಮಾಹಿತಿ ಪಡೆದ ಕೂಡಲೇ ಪರಿಶೀಲನೆ ನಡೆಸಿದ್ದು, ಸ್ಫೋಟಕ ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.










