ತುಮಕೂರು: ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಗ್ನಿ ಅವಘಡ ಸಂಭವಿಸಿ ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಬಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವತಿಯನ್ನು 18 ವರ್ಷದ ಭವ್ಯಾ ಎಂದು ಗುರುತಿಸಲಾಗಿದೆ. ಜೊತೆಗೆ ಆಕೆಯ ತಾಯಿ ರತ್ನಮ್ಮ ಕೂಡ ಇದ್ದರು. ಗಂಭೀರ ಗಾಯಗೊಂಡಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭವ್ಯ ಹಾಗೂ ರತ್ನಮ್ಮ ಸಿರಾ ತಾಲೂಕಿನ ಜವನಹಳ್ಳಿ ನಿವಾಸಿಗಳಾಗಿದ್ದಾರೆ. ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯ ದೃಶ್ಯಾವಳಿಗಳು ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.
ಪ್ಲಾಸ್ಟಿಕ್ ಕ್ಯಾನೊಂದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗಲು ಇಬ್ಬರೂ ಬಂಕ್ಗೆ ಬಂದಿದ್ದರು. ರತ್ನಮ್ಮ ಅವರು ಬೈಕ್‍ನಿಂದ ಇಳಿದು ಪ್ಲಾಸ್ಟಿಕ್ ಕ್ಯಾನ್‍ಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದರು. ಮೊದಲು ಬೆಂಕಿ ಕ್ಯಾನ್‍ಗೆ ಹೊತ್ತಿಕೊಂಡಿದೆ. ಇದೇ ವೇಳೆ ಬೈಕ್‍ನಲ್ಲಿ ಕುಳಿತಿದ್ದ ಮಗಳು ಕ್ಯಾನ್ ಬೈಕ್ ಸಮೇತ ಬಿಟ್ಟು ಓಡಲು ಯತ್ನಿಸಿದಾಗ ಕ್ಯಾನ್‍ನಲ್ಲಿದ್ದ ಪೆಟ್ರೋಲ್ ಈಕೆ ಮೇಲೆಯೇ ಚೆಲ್ಲಿದೆ. ಇದರಿಂದ ಪಕ್ಕದಲ್ಲಿ ನಿಂತಿದ್ದ, ತಾಯಿ ಮೇಲೂ ಬೆಂಕಿ ಹತ್ತಿದೆ. ತಾಯಿ ಓಡಿದ್ದು, ಅಲ್ಲಿ ನೆರೆದಿದ್ದವರು ಸೇರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಆದರೆ ಮಗಳ ಮೇಲೆ ಬೆಂಕಿ ಸಂಪೂರ್ಣ ಹೊತ್ತಿಕೊಂಡಿದ್ದರಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಗಾಯಾಳುಗಳನ್ನು ತಕ್ಷಣವೇ ಶಿರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹಿಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಭವ್ಯಾ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










