ಸೂರಜ್ಕುಂಡ್ : ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ವಿಚಾರವನ್ನು ಪ್ರಸ್ತಾಪಿಸಿದ್ದು, ಇದು ಕೇವಲ ಸಲಹೆ. ಅದನ್ನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇಂದು ಹರ್ಯಾಣದ ಸೂರಜ್ಕುಂಡ್ ನಲ್ಲಿ ಕೇಂದ್ರ ಗೃಹ ಸಚಿವರ ಚಿಂತನ್ ಶಿಬಿರ್ ಉದ್ದೇಶಿಸಿ ವಿಡಿಯೊ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, ಪೊಲೀಸರಿಗೆ ಒಂದು ರಾಷ್ಟ್ರ, ಒಂದು ಸಮವಸ್ತ್ರ ಬರಬಹುದು. ಅದು ಇಂದು ಆಗದೇ ಇರಬಹುದು. ಅದಕ್ಕೆ 5, 50 ಅಥವಾ 100 ವರ್ಷಗಳು ತೆಗೆದುಕೊಳ್ಳಬಹುದು, ಆದರೆ ನಾವು ಯೋಚಿಸೋಣ ಎಂದು ಹೇಳಿದರು.
ಒಂದು ವೇಳೆ ಇದು ಜಾರಿಯಾದರೆ ಪೊಲೀಸರ ಗುರುತು ಒಂದೇ ಆಗಿರುತ್ತದೆ. ದೇಶಾದ್ಯಂತ ಪೊಲೀಸರು ಒಂದೇ ರೀತಿ ಕಾಣುತ್ತಾರೆ. ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲು ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕು ಎಂದು ಮೋದಿ ಹೇಳಿದರು.
ಎರಡು ದಿನಗಳ ಕಾಲ ಚಿಂತನ್ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು 16 ರಾಜ್ಯಗಳ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಭಾಗಿಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.










