ಯಾದಗಿರಿ : ಪೊಲೀಸರ ಮೇಲೆ ಪಿಸ್ತೂಲ್ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಕಳ್ಳತನದ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಗರದ ವರ್ಕನಳ್ಳಿ ರಸ್ತೆ ಬಳಿ ನಡೆದಿದೆ.
ಮಹಮ್ಮದ್ ರಫಿ ಗುಂಡೇಟು ತಿಂದ ಆರೋಪಿ. ಆರೋಪಿ ಮಹಮ್ಮದ್ ರಫಿಯನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ ಆತ ಪಿಸ್ತೂಲ್ ಹಾಗೂ ಚಾಕುವಿನಿಂದ ಹೆದರಿಸಿದ್ದಾನೆ. ಈ ವೇಳೆ ಸಿಪಿಐ ಸುನೀಲ್ ವಿ.ಮೂಲಿಮನಿ, ಪಿಸಿ ಅಬ್ದುಲ್ ಭಾಷ ಹಾಗೂ ಹರಿನಾಥರೆಡ್ಡಿಯವರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆರೋಪಿ ಮೂವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಸಿಪಿಐ ಸುನೀಲ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸದ್ಯ ಆರೋಪಿ ಮಹಮ್ಮದ್ ರಫಿಯನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ ಗಾಯಗೊಂಡ ಸಿಪಿಐ ಹಾಗೂ ಸಿಬ್ಬಂದಿಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ ಪಿ ಸಿ.ಬಿ ವೇದಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ, ಸಿಪಿಐ ಹಾಗೂ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಫೆ. 24ರಂದು ಯಾದಗಿರಿ ನಗರದಲ್ಲಿ ಉದ್ಯಮಿ ದೀಪಕ್ ನಂದಕಿಶೋರ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಎಂಟರಿಂದ ಹತ್ತು ಜನರ ತಂಡದಲ್ಲಿ ನಾಲ್ಕು ಜನ ದೀಪಕ್ ನಂದಕಿಶೋರ್ ಮನೆಯೊಳಗೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನ, ಬೆಳ್ಳಿ, ಮೊಬೈಲ್ ಹಾಗೂ ಹಣವನ್ನು ದೋಚಿದ್ದರು. ದೀಪಕ್ ಕುಟುಂಬಸ್ಥರು ವಿರೋಧಿಸಿದಾಗ ಖಾರದಪುಡಿ ಎರಚಿ ವಿಕೃತಿ ಮರೆದಿದ್ದರು. ಈ ವೇಳೆ ದೀಪಕ್ ಸಹೋದರ ಮನೆಯ ಮಹಡಿಯಿಂದ ಹಾರಿ ಕಿರುಚಾಡಿ ಜನರನ್ನ ಸೇರಿಸಿದ್ದರು. ಜನ ಬರುವಷ್ಟರಲ್ಲಿ ಕಳ್ಳರು ತಪ್ಪಿಸಿಕೊಂಡಿದ್ದರು. ನಗರದ ಪ್ರಮುಖ ಸರ್ಕಲ್ ಬಳಿ ಇರುವ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸಂಪೂರ್ಣ ಮಾಹಿತಿ ಸಿಕ್ಕಿತ್ತು.
ಪ್ರಕರಣ ಸಂಬಂಧ ಯಾದಗಿರಿ ಎಸ್ ಪಿ ಸಿಬಿ ವೇದಮೂರ್ತಿ, ಎಸ್ ಪಿ ಸುನೀಲ್ ವಿ ಮೂಲಿಮನಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಸತತ 15 ದಿನಗಳ ಕಾಲ ಹೈದರಾಬಾದ್, ನಾರಾಯಣಪೇಟೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಿದ್ದ ಪೊಲೀಸರ ತಂಡ ನಿನ್ನೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು. ಆದರೆ ಗ್ಯಾಂಗ್ ಲೀಡರ್ ಮಹಮ್ಮದ್ ರಫೀ ಹಾಗೂ ಸಲೀಂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿದ್ದರು. ಸಲೀಂ ಹಾಗೂ ರಫಿ ಯಾದಗಿರಿ ನಗರದ ವರ್ಕನಳ್ಳಿ ಭಾಗದಲ್ಲಿ ಅಡಗಿ ಕುಳಿತಿದ್ದ ಖಚಿತ ಮಾಹಿತಿ ಪಡೆದ ಸಿಪಿಐ ಸುನೀಲ್ ನೇತೃತ್ವದ ತಂಡ ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದೆ.










