ನವದೆಹಲಿ: ದೆಹಲಿಯಿಂದ ದೋಹಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ಪಾಕಿಸ್ತಾನದ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್ ಲೈನ್ಸ್ ತಿಳಿಸಿದೆ.
ಇಂದು ಬೆಳಗ್ಗೆ ದೆಹಲಿಯಿಂದ ಇಂಡಿಗೋ ಏರ್ ಲೈನ್ ಸಂಸ್ಥೆಯ 6ಇ-1736 ವಿಮಾನವು ಪ್ರಯಾಣ ಬೆಳೆಸಿದೆ. ವಿಮಾನ ಜರ್ನಿ ಆರಂಭವಾದ ಕೆಲ ಕ್ಷಣಗಳಲ್ಲಿ, ಪ್ರಯಾಣಿಕ ನೈಜೀರಿಯಾ ಮೂಲದ ಅಬ್ದುಲ್ಲಾ (60) ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ವಿಚಾರದ ತಿಳಿದ ಕೂಡಲೇ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ ಪೈಲಟ್, ಅಬ್ದುಲ್ಲಾ ಅವರ ಪರಿಸ್ಥಿತಿಯನ್ನು ವಿವರಿಸಿ ತುರ್ತು ಭೂಸ್ಪರ್ಶಕ್ಕಾಗಿ ಅನುಮತಿ ಕೋರಿದ್ದಾರೆ. ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮೋದಿಸಿ, ತುರ್ತು ಭೂಸ್ಪರ್ಶ ಮಾಡಲು ಅನುಮತಿ ನೀಡಿದ್ದಾರೆ.
ಇತ್ತ ಅದಾಗಲೇ ಅಬ್ದುಲ್ಲಾ ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಿಮಾನವನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸುವ ಮುನ್ನವೇ ಅಬ್ದುಲ್ಲಾ ಅಸುನೀಗಿದ್ದಾರೆ.
ಘಟನೆ ಕುರಿತು ಇಂಡಿಗೋ ಪ್ರತಿಕ್ರಿಯಿಸಿದ್ದು, ಈ ಸುದ್ದಿಯಿಂದ ನಮಗೆ ಅತೀವ ದುಃಖವಾಗಿದೆ. ನಮ್ಮ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅವರ ಪ್ರೀತಿಪಾತ್ರರ ಜೊತೆಗಿವೆ. ಪ್ರಸ್ತುತ, ನಾವು ವಿಮಾನದ ಇತರ ಪ್ರಯಾಣಿಕರನ್ನು ಸಂಬಂಧಿತ ಅಧಿಕಾರಿಗಳ ಸಮನ್ವಯದಲ್ಲಿ ವರ್ಗಾಯಿಸಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದೆ.










