ವಾರ್ಸಾ : ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದ್ದ ವೇಳೆ ಎರಡು ಕ್ಷಿಪಣಿಗಳು ಪೋಲೆಂಡ್ ಭೂಪ್ರದೇಶಕ್ಕೆ ಬಂದು ಬಿದ್ದಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
ಪೋಲೆಂಡ್ ನಲ್ಲಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ನ್ಯಾಟೋ ನಾಯಕರೊಂದಿಗೆ ತುರ್ತು ಸಭೆ ಕರೆದಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ 20 ಸಭೆಗಾಗಿ ಜಾಗತಿಕ ನಾಯಕರು ಇಂದು ಪೋಲೆಂಡ್ ನಲ್ಲಿ ಸ್ಫೋಟಗಳ ನಂತರ ತುರ್ತು ಸಭೆ ನಡೆಸಿದರು.
ಈ ನಡುವೆ ಉಕ್ರೇನ್ ಗಡಿಯಲ್ಲಿರುವ ಸೇನಾ ನೆಲೆಗಳಲ್ಲಿ ಪೊಲೆಂಡ್ ಕಟ್ಟೆಚ್ಚರ ಘೋಷಿಸಿದೆ. ದಾಳಿ ಪಡೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು, ಸಶಸ್ತ್ರಪಡೆಯ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪೊಲೆಂಡ್ ಸರ್ಕಾರವು ಆದೇಶ ಹೊರಡಿಸಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ, ಏನಾಗಿದೆ ಎಂಬ ಬಗ್ಗೆ ವಿಸ್ತೃತ ವರದಿ ಪಡೆದುಕೊಂಡ ನಂತರ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದೆ.
ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಪೊಲೆಂಡ್ ಗೆ ನ್ಯಾಟೊ ಒಪ್ಪಂದದ 5ನೇ ಪರಿಚ್ಛೇದವಾಗಿರುವ ‘ಸಮಗ್ರ ರಕ್ಷಣೆ’ಯ ಬಲವಿದೆ. ಈ ಪರಿಚ್ಛೇದದ ಅನ್ವಯ ಯಾವುದೇ ಸದಸ್ಯ ದೇಶದ ಮೇಲೆ ಮತ್ತೊಂದು ದೇಶ ದಾಳಿ ನಡೆಸಿದರೆ ಅದನ್ನು ಎಲ್ಲಾ ಸದಸ್ಯ ರಾಷ್ಟ್ರಗಳ ವಿರುದ್ಧದ ದಾಳಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಘಟನೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯಿದೆ.










