ಪ್ರಜಾಸತ್ತಾತ್ಮಕ ಗುಣಗಳೇ ಇಲ್ಲದವರಿಂದ ಪ್ರಜಾಪ್ರಭುತ್ವ ರಕ್ಷಣೆ ಹೇಗಾಗುತ್ತದೆ : ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ…

52
firstsuddi

ನವದೆಹಲಿ : ಸಂವಿಧಾನ ದಿನಾಚರಣೆ ಪ್ರಯುಕ್ತ ಸಂಸತ್ ನಲ್ಲಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷವಾಗಿದೆ… ಈ ಬಗ್ಗೆ ನಾನು ಹೆಚ್ಚು ಹೇಳಬೇಕೆ? ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಳ್ಳುವುದು, ಸಂವಿಧಾನದ ಆತ್ಮ ಹಾಗೂ ಸಂವಿಧಾನದ ಎಲ್ಲಾ ವಿಧಿಗಳಿಗೂ ಎಸಗಿದ ದ್ರೋಹವಾಗುತ್ತದೆ. ಪ್ರಜಾಸತ್ತಾತ್ಮಕ ಗುಣಗಳೇ ಇಲ್ಲದ ಕೆಲವು ಪಕ್ಷಗಳಿಂದ ಪ್ರಜಾಪ್ರಭುತ್ವ ರಕ್ಷಣೆ ಹೇಗಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಸಂವಿಧಾನ ನೀಡಲು ಸಾಕಷ್ಟು ಜನರು ಪರಿಶ್ರಮಪಟ್ಟಿದ್ದಾರೆ. ಹಲವು ಅಡೆತಡೆಗಳ ನಂತರ ಇದನ್ನು ರಚಿಸಲಾಗಿದೆ. ದೇಶದಲ್ಲಿನ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಲಾಗಿದೆ. ಮಹಾತ್ಮ ಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವವಾದ ಇಂದು ಉಗ್ರರ ವಿರುದ್ಧ ಹೋರಾಡುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶದ ಎಲ್ಲಾ ವೀರ ಸೈನಿಕರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.