ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದ ಕಾಂತಾರ- ಪ್ರಶಸ್ತಿಯನ್ನು ಶಂಕರ್ ನಾಗ್​ಗೆ ಅರ್ಪಿಸಿದ ರಿಷಬ್ ಶೆಟ್ಟಿ.

56
firstsuddi

ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಇದೀಗ ಗೋವಾದಲ್ಲಿ ನಡೆಯುತ್ತಿರುವ 54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ರಿಷಬ್ ಅವರ ಖುಷಿಯನ್ನು ಹೆಚ್ಚಿಸಿದೆ. ಅವರು ಅಭಿಮಾನಿಗಳಿಗೆ ವಿಶೇಷ ಪತ್ರ ಒಂದನ್ನು ಬರೆದಿದ್ದು, ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.

‘54ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದೆ. ಇದು ಎಂದೂ ಮರೆಯಲಾಗದ ಕ್ಷಣಗಳಲ್ಲಿ ಉಳಿದುಕೊಳ್ಳುತ್ತದೆ. ನನ್ನ ಸ್ಫೂರ್ತಿಯಾದ ಶಂಕರ್ ನಾಗ್ ಅವರಿಗೆ 1979ರಲ್ಲಿ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಇದೇ ಚಿತ್ರೋತ್ಸವದಲ್ಲಿ ದೊರಕಿತ್ತು. ಅವರು ತೋರಿಸಿರುವ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ನನಗೆ ಇಂದು ಈ ಅವಾರ್ಡ್ ದೊರೆತದ್ದು ಅತ್ಯಂತ ಸಂತಸ ನೀಡಿದೆ’ ಎಂದು ರಿಷಬ್ ಶೆಟ್ಟಿ ಪತ್ರ ಆರಂಭಿಸಿದ್ದಾರೆ.

‘ಕಾಂತಾರವನ್ನು ನೋಡಿ ಕನ್ನಡಿಗರು ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದೀರಿ. ಇದೀಗ ಕಾಂತಾರ ಒಂದನೇ ಅಧ್ಯಾಯಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆ ಮತ್ತು ಬೆಂಬಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮತ್ತೊಮ್ಮೆ ಉತ್ತಮವಾದ ಚಿತ್ರವನ್ನು ನೀಡಲು ಶ್ರಮಿಸುತ್ತೇನೆ. ಈ ನನ್ನ ಎಲ್ಲ ಪ್ರಯತ್ನ ಹಾಗೂ ಯಶಸ್ಸಿಗೆ ಕಾರಣರಾದ ಪ್ರೀತಿಯ ಕನ್ನಡಿಗರಿಗೆ ನಾನು ಸದಾ ಆಭಾರಿ. ಈ ಪ್ರಶಸ್ತಿಯನ್ನು ನಾನು ಶಂಕರ್ ನಾಗ್ ಅವರಿಗೆ ಅರ್ಪಿಸುತ್ತಿದ್ದೇನೆ’ ಎಂದಿದ್ದಾರೆ.

ಸದ್ಯ ‘ಕಾಂತಾರ’ ಚಾಪ್ಟರ್ 1 ಫಸ್ಟ್ ಲುಕ್ ಬಿಡಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.