ಮುಂಬೈ : ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಚಿತ್ರ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಮೇ24 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ಮಾಪಕ ಪ್ರದೀಪ್ ಸಿಂಗ್ ಹೇಳಿದ್ದು, ಲೋಕಸಭಾ ಚುನಾವಣೆಯ ಕಾರಣದಿಂದ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‍ಗೆ ತಿಳಿಸಿತ್ತು. ಮೋದಿಯವರ ಬಯೋಪಿಕ್ ಸಿನಿಮಾ ನೋಡಿದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ತೀರ್ಮಾನಿಸಿ ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದ್ದು, ಬಳಿಕ ಚುನಾವಣಾ ಆಯೋಗದ ಅಧಿಕಾರಿಗಳು ಚಿತ್ರವನ್ನು ವೀಕ್ಷಿಸಿ ಚಿತ್ರದಲ್ಲಿ ಮೋದಿಯವರನ್ನು ಹೆಚ್ಚಾಗಿ ಪ್ರಶಂಸೆ ಮಾಡಲಾಗಿದೆ. ಅಲ್ಲದೇ ಕೆಲವು ಪಕ್ಷಗಳು ಭ್ರಷ್ಟಾಚಾರ ಮಾಡುತ್ತಿದೆ ಎಂಬುವುದನ್ನು ಬಿಂಬಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಚಿತ್ರವನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿತ್ತು ಎಂದು ಹೇಳಿದ್ದಾರೆ. ಚಿತ್ರದಲ್ಲಿ ಪ್ರಧಾನಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅಭಿನಯಿಸಿದ್ದು, ಚಿತ್ರದಲ್ಲಿ ಬೊಮ್ಮನ್ ಇರಾನಿ, ಮನೋಜ್ ಜೋಷಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.










