ಇಸ್ಲಾಮಾಬಾದ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿ ವಿಚಾರವಾಗಿ ಪಾಕಿಸ್ತಾನ ಸರ್ಕಾರ ಕ್ಯಾತೆ ತೆಗೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿ ಚೆನಾಬ್ ನದಿ ನೀರನ್ನು ಬಳಸಿಕೊಂಡು ಆರಂಭಿಸುವ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೆ ಪಾಕಿಸ್ತಾನ ಪಧಾನಿ ಶಹಬಾಜ್ ಷರೀಫ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕಾಶ್ಮೀರ ಭೇಟಿಯನ್ನು ಟೀಕಿಸಿರುವ ಪಾಕಿಸ್ತಾನ, ಇದು ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದದ ನೇರ ಉಲ್ಲಂಘನೆ, “ಭಾರತದ ಪ್ರಧಾನಿಯವರು ಎರಡು ಯೋಜನೆಗಳ ಶಂಕುಸ್ಥಾಪನೆಯನ್ನು ಪಾಕಿಸ್ತಾನವು 1960 ರ ಸಿಂಧೂ ಜಲ ಒಪ್ಪಂದದ (IWT) ನೇರ ಉಲ್ಲಂಘನೆ ಎಂದು ಪರಿಗಣಿಸುತ್ತದೆ” ಎಂದು ಆರೋಪಿಸಿದೆ. ಕಾಶ್ಮೀರ ಸಮಸ್ಯೆನ್ನು ಮರೆಮಾಚಲು ಭಾರತ ಕೈಗೊಂಡಿರುವ ಇಂತಹ ಹತಾಶ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯ ಸಾಕ್ಷಿಯಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಟೀಕಿಸಿದೆ.
2019ರ ಆಗಸ್ಟ್ ನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಮೋದಿ ಅವರು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಈ ಭೇಟಿ ಭಾರೀ ಮಹತ್ವ ಪಡೆದಿತ್ತು.










