ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ : ಸಂಸದೆ ಸುಮಲತಾ.

67
firstsuddi

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ. ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಮೋದಿ ನಾಯಕತ್ವವನ್ನು ನಾನು ನಂಬಿದ್ದೇನೆ. ಈ ಕಾರಣಕ್ಕಾಗಿ ಬಿಜೆಪಿಗೆ ನಾನು ಬೆಂಬಲಿಸುವುದಾಗಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಘೋಷಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ನನ್ನ ಭವಿಷ್ಯ ಅಲ್ಲ. ಇದು ಮಂಡ್ಯ ಜಿಲ್ಲೆ ಅಭಿವೃದ್ಧಿ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ನನ್ನ ಮುಂದಿನ ಭವಿಷ್ಯ ಹೇಗಿರುತ್ತೆ ಎಂದು ಆತಂಕ ಕಾಡಬಹುದು. ಆದರೆ ನನಗೆ ಅದ್ಯಾವ ಯೋಚನೆಯೂ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಗಳು ಮತ್ತು ನಾಯಕತ್ವ ಮೆಚ್ಚಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ತಿಳಿಸಿದರು.

ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಕೆಆರ್ಎಸ್ ನಲ್ಲಿ ಬಾಗಿನ ಅರ್ಪಿಸಿದ್ದರು. ಅದಕ್ಕೂ ಮೊದಲು ದೆಹಲಿಯಲ್ಲಿ ನನ್ನ ಭೇಟಿ ಮಾಡಿ ಮಂಡ್ಯಗೆ ಏನು ಮಾಡಬೇಕೆಂದು ನನ್ನ ಕೇಳಿದ್ದರು. ಆಗ ಮೈಶುಗರ್ ಕಾರ್ಖಾನೆ ಓಪನ್ ಮಾಡಿಸಿ ಎಂದೆ. ಆಗ ಪರ ವಿರೋಧ ಎಲ್ಲವೂ ಬಂದಿತ್ತು. ಆದರೂ ಯಡಿಯೂರಪ್ಪ ಅವರು ಸುಮಲತಾ ಹೇಳಿದ್ದಾರೆ ಎಂದು ಮೈಶುಗರ್ ಓಪನ್ ಮಾಡಿಸಿದರು. ಬೊಮ್ಮಾಯಿ ಅವರು 50 ಕೋಟಿಯನ್ನು ನೀಡಿದರು. ಈ ಅಭಿವೃದ್ಧಿ ಆಗಿದ್ದು ಬಿಜೆಪಿಯಿಂದ. ನನಗೆ ಬಿಜೆಪಿ ಬೆಂಬಲ ನೀಡಿದೆ. ಅದಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದರು.

ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುವುದಿಲ್ಲ. ಬಿಜೆಪಿ ಸೇರ್ಪಡೆಗೆ ಕೆಲವು ತಾಂತ್ರಿಕ ತೊಂದರೆಗಳಿವೆ. ಮೋದಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅಂಬರೀಶ್ ಹೆಸರಿಗೆ ಕಳಂಕ ತರುವ ಕೆಲಸ ನಾನು ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಸ್ವಚ್ಛತೆಯ ಅಗತ್ಯವಿದೆ. ಕಲುಷಿತ ರಾಜಕಾರಣ ಸ್ವಚ್ಛತೆಗೊಳಿಸಲು ಅಭಿಯಾನ ನಡೆಸೋಣ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಜೆಡಿಎಸ್ ಸೋಲಿಸಲು ಕರೆ ನೀಡಿದರು.