ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್ಐಎ ಕಾಟಾಚಾರಕ್ಕೆ ತನಿಖೆ ಮಾಡಬಾರದು ಎಂದ ಹೆಚ್.ಡಿ.ಕುಮಾರಸ್ವಾಮಿ

70
firstsuddi

ಮಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು ಹಾಗೂ ವಿಷ್ಣುನಗರ ಕಲೆಂಜದ ಮಹಮ್ಮದ್ ಮಸೂದ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಹೇಳುವುದು ಇಷ್ಟೇ. ಪ್ರಕರಣದ ತನಿಖೆ ಕಾಟಾಚಾರಕ್ಕೆ ಆಗಬಾರದು. ಯಾವುದೇ ಕಾರಣಕ್ಕೂ ಈ ಕುಟುಂಬಗಳು ನ್ಯಾಯದಿಂದ ವಂಚಿತರಾಗಬಾರದು ಎಂದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಎನ್ ಐಎಗೆ ಕೊಟ್ಟು ನಮ್ಮಲ್ಲಿರುವ ಉತ್ತಮ ಪೊಲೀಸ್ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡಿದೆ. ಎನ್ ಐಎಗೆ ಈ ಹಿಂದೆ ಕೊಟ್ಟ ಯಾವುದೇ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಿಲ್ಲ. ಆದರೆ ಈ ಪ್ರಕರಣವನ್ನು ಎನ್ ಐಎ ಕಾಟಾಚಾರಕ್ಕೆ ತನಿಖೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಈ ಎರಡು ಕುಟುಂಬಗಳಿಗೆ ನಮ್ಮ ಕಡೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಿದ್ದೇವೆ. ನನ್ನ ಮೊಬೈಲ್ ನಂಬರ್ ನೀಡಿದ್ದೇನೆ. ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದರೆ ನೇರವಾಗಿ ಕರೆ ಮಾಡಿ ಮಾತನಾಡಬಹುದು. ಅಗತ್ಯಬಿದ್ದರೆ ಮತ್ತೆ ಆರ್ಥಿಕ ಹಣಕಾಸು ನೀಡುತ್ತೇವೆ ಎಂದು ಭರವಸೆ ನೀಡಿದರು.