ಪ್ರಿನ್ಸ್ ಮಹೇಶ್ ಬಾಬು ತಾಯಿ ಇನ್ನಿಲ್ಲ…

76
firstsuddi

ಹೈದರಾಬಾದ್: ತೆಲುಗು ನಟ ‘ಪ್ರಿನ್ಸ್’ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಅವರು ವಿಧಿವಶರಾಗಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಇಂದಿರಾ ದೇವಿ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಕೆಲ ವಾರಗಳ ಹಿಂದೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್ ನಲ್ಲಿರಿಸಿ, ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ.

ಮಹೇಶ್ ಬಾಬು ತಂದೆ ಕೃಷ್ಣ ಅವರು ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. ಅವರ ಪುತ್ರ ರಮೇಶ್ ಬಾಬು ಅವರು ಈ ವರ್ಷ ಆರಂಭದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಇಂದಿರಾ ದೇವಿ ನಿಧನದಿಂದ ಇಡೀ ಕುಟುಂಬದಲ್ಲಿ ಶೋಕ ಆವರಿಸಿದೆ. ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇಂದಿರಾ ದೇವಿ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿದೆ. ನಂತರ ಮಹಾ ಪ್ರಸ್ಥಾನಂನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.