ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ…

30
firstsuddi

ಆನೇಕಲ್: ಪ್ರೀತಿಸಲು ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.

ಹರ್ಷಿತ್ ಮೃತ ಯುವಕ. ಮೃತ ಹರ್ಷಿತ್ ತುಮಕೂರು ಮೂಲದ ಮೃದುಲಾ ಅಲಿಯಾಸ್ ಮೇಘಾ ಎಂಬವರನ್ನು ಪ್ರೀತಿಸುತ್ತಿದ್ದ. ಮೃದುಲಾ ಕೂಡ ಹರ್ಷಿತ್​ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

ಮೃದುಲಾ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದಳು. ಈ ಪ್ರೀತಿ ವಿಚಾರ ಮೃದಲಾ ಅತ್ತೆ-ಮಾವನಿಗೆ ಗೊತ್ತಾಗಿದೆ. ಆಗ ಮೃದಲಾ ಅತ್ತೆ-ಮಾವ ಪ್ರೀತಿಸದಂತೆ ಹರ್ಷಿತ್​ಗೆ ಬೆದರಿಕೆ ಹಾಕಿದ್ದರು. ಅಲ್ಲದೆ ಅಪರಿಚಿತ ವ್ಯಕ್ತಿ ಹರ್ಷಿತ್​ಗೆ ಫೋನ್ ಕರೆ ಮಾಡಿ, “ಮೃದುಲಾಳನ್ನು ಮದುವೆಯಾಗುತ್ತೇನೆ ಆಕೆಯ ತಂಟೆಗೆ ಬರಬೇಡ” ಎಂದು ಬೆದರಿಕೆ ಹಾಕಿದ್ದನು. ಇದಾದ ಬಳಿಕ ಯುವತಿ ಮೃದುಲಾ ಹರ್ಷಿತ್​ನನ್ನು ಪ್ರೀತಿಸಲು ನಿರಾಕರಿಸಿದ್ದಳು.

ಇದರಿಂದ ಮನನೊಂದ ಹರ್ಷಿತ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಬಳಿಕ ಬ್ಲೇಡ್​ನಿಂದ ಕೈ ಕೊಯ್ದುಕೊಂಡಿದ್ದಾನೆ. ಕೈ ಕೊಯ್ದುಕೊಂಡಿದ್ದನ್ನು ಪೋಟೋ ತೆಗೆದು ತಾಯಿಯ ಮೊಬೈಲ್ ಹಾಗೂ ಹುಡುಗಿಯ ನಂಬರ್​​ಗೆ ಹರ್ಷಿತ್ ವಾಟ್ಸಾಪ್ ಮಾಡಿದ್ದಾನೆ. ಇದನ್ನು ಕಂಡ ತಾಯಿ, ಹರ್ಷಿತ್ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದು ನೋಡುವಷ್ಟರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಯುವತಿ ಮೃದುಲಾ ಮತ್ತು ಆಕೆಯ ಅತ್ತೆ ಕವಿತಾ, ಮಾವ ಹಾಗೂ ಅಪರಿಚಿತ ನಂಬರ್​ನಿಂದ ಕರೆ ಮಾಡಿದ್ದ ವ್ಯಕ್ತಿಯ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.