ಮಂಡ್ಯ: ಕಾರಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಅಂದಾಜು 1 ಕೋಟಿ ನಗದು ಹಣ ಪತ್ತೆ…

38
firstsuddi

ಮಂಡ್ಯ: ಜಿಲ್ಲೆಯ ಗಡಿಭಾಗದ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಅಂದಾಜು 1 ಕೋಟಿ ನಗದು ಹಣ ಪತ್ತೆಯಾಗಿದ್ದು, ಚುನಾವಣಾ ಸಿಬ್ಬಂದಿ ಮತ್ತು ಮದ್ದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗಿರೀಶ್ ಎಂಬುವರು ಕ್ರೆಟಾ ಕಾರಿನಲ್ಲಿ ಬೆಂಗಳೂರಿನಿಂದ ಕೆ.ಆರ್.ಪೇಟೆ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಪೊಲೀಸರು ಕೊಂಗಬೋರನದೊಡ್ಡಿ ಬಳಿ ನಿನ್ನೆ ಸಂಜೆ 7 ಗಂಟೆಯ ವೇಳೆ ಕಾರು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ 99 ಲಕ್ಷದ 20 ಸಾವಿರ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಣ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.