ಬೆಂಗಳೂರು : ಬಂಧಿಸಲು ಹೋದ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ರೌಡಿಶೀಟರ್ ಒಬ್ಬ ಡ್ರ್ಯಾಗರ್ ನಿಂದ ಇರಿದಿರುವ ಘಟನೆ ನಗರದ ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ಜ್ಯೋತಿನಗರದಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿನುತಾ ಅವರಿಗೆ ಆರೋಪಿ ಶೇಕ್ ಶರೀಫ್ ಎಂಬಾತ ಡ್ರ್ಯಾಗರ್ ನಿಂದ ಇರಿದಿದ್ದಾನೆ.
ಆರೋಪಿ ಶೇಕ್ ಶರೀಫ್ ವಿರುದ್ಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ, ಮತ್ತೊಂದು ಕೊಲೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಆಗಸ್ಟ್ 5 ರಂದು ಆರೋಪಿಯನ್ನು ಬಂಧಿಸಲು ಮಹಿಳಾ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ವಿನುತಾ ಮತ್ತು ತಂಡ ಹೋಗಿತ್ತು.
ಪೊಲೀಸರಿಗೆ ಆರೋಪಿ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ರಾತ್ರಿ 9.30ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಠಾಣೆಗೆ ಕರೆತಂದಿದ್ದಾರೆ.
ಸದ್ಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಜೀವಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










