ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 2023-24ನೇ ಸಾಲಿನ ಕೇಂದ್ರ ಬಜೆಟ್ ಗೆ ವೇದಿಕೆ ಸಿದ್ಧವಾಗಿದೆ. ನಿರ್ಮಲಾ ಸೀತಾರಾಮನ್ ಸಂಸತ್ ನ ಜಂಟಿ ಅಧಿವೇಶನದಲ್ಲಿ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರ 5ನೇ ಬಜೆಟ್ ಆಗಿದೆ. 2024ರ ಲೋಕಸಭಾ ಚುನಾವಣೆಯ ಮುನ್ನ ನಡೆಯುವ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿರುವುದರಿಂದ ಜನರು ಬಹು ನೀರಿಕ್ಷೆಗಳನ್ನು ಹೊಂದಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ರಾಜ್ಯ ಸಚಿವರಾದ ಡಾ.ಭಗವತ್ ಕಿಶನ್ ರಾವ್ ಕರಾಡ್, ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ನಿರ್ಮಲಾ ಸೀತಾರಾಮ್ ಅವರ 5ನೇ ಬಜೆಟ್ ಮೇಲೆ ಜನರು ದೊಡ್ಡ ಪ್ರಮಾಣದಲ್ಲಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ಬಜೆಟ್ ನಲ್ಲಿ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.
ರಾಷ್ಟ್ರಪತಿ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ನಿನ್ನೆ ಆರಂಭವಾಯಿತು. ಈ ವರ್ಷದ ಬಜೆಟ್ ಅಧಿವೇಶನವು ಏಪ್ರಿಲ್ 6ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ಭಾಗ ಆರಂಭವಾಗಿದ್ದು, ಫೆಬ್ರವರಿ 13 ರವರೆಗೆ ನಡೆಯಲಿದೆ. ಬಜೆಟ್ ಮೇಲಿನ ಚರ್ಚೆಗಾಗಿ ಎರಡನೇ ಕಂತು ಮಾರ್ಚ್ 12ರಿಂದ ಆರಂಭವಾಗಿ ಏಪ್ರಿಲ್ 6ರಂದು ಕೊನೆಗೊಳ್ಳಲಿದೆ.










