ಮೂಡಿಗೆರೆ : ನಮ್ಮ ನಡುವೆ ಇದ್ದು ನಮ್ಮನಗಲಿದ ಜೀವಗಳನ್ನು ಸಮಾಜಮುಖಿ ಕಾರ್ಯಗಳ ಮೂಲಕ ಸ್ಮರಿಸುವ ಅಗತ್ಯವಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಣಕಲ್‍ನಲ್ಲಿ ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಮೋಹನ್‍ಕುಮಾರ್ ಶೆಟ್ಟಿಯವರು ಸಾಹಿತ್ಯ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದವರು. ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜದ ಏಳಿಗೆಗೆ ದುಡಿದವರು. ಮೋಹನ್‍ಕುಮಾರ್ ಶೆಟ್ಟಿಯವರ ಅವರ ನೆನಪಿನಲ್ಲಿ ರಕ್ತದಾನ ಶಿಬಿರದಂತಹ ಕಾರ್ಯಕ್ರಮ ಮಾಡಿರುವುದು ಅರ್ಥಪೂರ್ಣ ಎಂದರು.
ವಿದ್ಯಾಭಾರತಿ ಶಾಲಾ ಸಮಿತಿ ಅಧ್ಯಕ್ಷ ಶಿವರಾಮಶೆಟ್ಟಿ ಮಾತನಾಡಿ ರಕ್ತದಾನ ಮಾಡುವುದರಿಂದ ರಕ್ತ ನೀಡಿದವನ ದೈಹಿಕ ಆರೋಗ್ಯವೂ ವೃದ್ದಿಸುವುದರ ಜೊತೆಗೆ ರಕ್ತ ಪಡೆದ ರೋಗಿಗೂ ಕೂಡ ಪ್ರಯೋಜನವಾಗುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾದ್ಯವಿಲ್ಲದೇ ಇರುವುದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿಟ್ಟು ರಕ್ತದಾನ ಮಾಡಿ ಎಂದರು.
ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಅಲ್ತಾಫ್ ಬಿಳುಗುಳ ಮಾತನಾಡಿ 18 ರಿಂದ 60 ವರ್ಷದೊಳಗಿನ 45 ಕೆಜಿಗಿಂತಲೂ ಹೆಚ್ಚು ತೂಕವಿರುವ 12.5 ಗ್ರಾಮ್‍ಗಿಂತಲೂ ಹೆಚ್ಚು ಹಿಮೋಗ್ಲೋಬೀನ್ ಅಂಶ ಹೊಂದಿರುವ ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡಬಹುದು. ರಕ್ತದಾನದ ನಂತರ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕು. ಆ ದಿನ ಹೆಚ್ಚು ನೀರು ಕುಡಿದರೆ ಒಳ್ಳೆಯದು. ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ರಕ್ತವೂ ಮತ್ತೆ ಮರು ತಯಾರಾಗುತ್ತದೆ. ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಅವಶ್ಯಕತೆ ಅನುಸಾರ ಮೂರು ರೋಗಿಗಳಿಗೆ ಅದನ್ನು ಉಪಯೋಗಿಸಬಹುದು ಎಂದರು.
ರಕ್ತದಾನ ಶಿಬಿರವನ್ನು ದಿವಂಗತ ಮೋಹನಕುಮಾರ್ ಶೆಟ್ಟಿ ಅವರ ಪತ್ನಿ ಸೌಭಾಗ್ಯ ಮೋಹನ್ ಉದ್ಘಾಟಿಸಿದರು.
40ಕ್ಕೂ ಹೆಚ್ಚು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಈ ಸಂದರ್ಭದಲ್ಲಿ ಬಣಕಲ್ ಗ್ರಾ.ಪಂ ಅಧ್ಯಕ್ಷ ಬಿ.ವಿ ಸುರೇಶ್, ಸದಸ್ಯರಾದ ಸತೀಶ್ ಮತ್ತಿಕಟ್ಟೆ, ಬಣಕಲ್ ಕಸಾಪ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ, ಕಸಾಪ ಕಾರ್ಯದರ್ಶಿ ವಸಂತ್ ಹಾರ್ಗೋಡು, ಜಿಲ್ಲಾ ರಕ್ತನಿಧಿ ಮುಖ್ಯಸ್ಥರಾದ ಡಾ. ಮುರುಳಿಧರ್, ಸಿಬ್ಬಂದಿಗಳಾದ ಲೋಕೇಶ್, ದೀಪಕ್, ವಿದ್ಯಾಭಾರತಿ ಶಾಲೆ ದೈಹಿಕ ಶಿಕ್ಷಕ ಶೇಖರಪ್ಪ, ಸ್ಥಳೀಯರಾದ ನಾಗವೇಣಿ, ಶಶಿಕುಮಾರ್, ಪ್ರದೀಪ್, ರಮೇಶ್, ಅರುಣಪೂಜಾರಿ, ಜ್ಯೋತಿಶ್ರೀ, ರವಿ, ಸೌಮ್ಯ, ಗಜೇಂದ್ರ, ಇರ್ಷಾದ್, ದಿನೇಶ್, ಶ್ರೀದರ್, ಪ್ರವೀಣ್, ಹೇಮಾವತಿ, ಮಂಜುಳಾ ಮುಂತಾದವರು ಇದ್ದರು.










