ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಅರುಣಾ ಲಕ್ಷ್ಮಿ ಸ್ಪರ್ಧೆ : ಜನಾರ್ದನ ರೆಡ್ಡಿ

60
firstsuddi

ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರು ಸ್ಪರ್ಧಿಸಲಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಘೋಷಿಸಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಈಗ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದೀಗ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಹೋದರನ ವಿರುದ್ಧವೇ ಪತ್ನಿಯನ್ನು ಕಣಕ್ಕಿಳಿಸುತ್ತಿರುವುದು ಆಶ್ಚರ್ಯ ತಂದಿದೆ.

ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ದೇವಾಲಯದ ಆವರಣದಲ್ಲಿ ಇಂದು ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪಕ್ಷ ಸ್ಥಾಪಿಸಿ ಕೇವಲ 30 ದಿನವಾಗಿದೆ, ಇಷ್ಟರಲ್ಲಿಯೇ ಕೆಆರ್ ಪಿಪಿ ಇಡೀ ರಾಜ್ಯದ ನಾಯಕರ ನಿದ್ದೆಗೆಡಿಸಿದೆ ಎಂದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಈಗಾಗಲೇ ಗಂಗಾವತಿಯಿಂದ ನಾನು ಕಣಕ್ಕಿಳಿಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ರೆಡ್ಡಿ ಅಧಿಕೃತವಾಗಿ ಹೇಳಿದರು.

ಸ್ವಂತ ಪಕ್ಷ ಸ್ಥಾಪಿಸದಂತೆ ಸಾಕಷ್ಟು ಕೈಗಳು ನನ್ನನ್ನು ತಡೆಯಲು ಯತ್ನಿಸಿದವು. ಆದರೆ ಇದಾವುದಕ್ಕೂ ನಾನು ಜಗ್ಗಿಲ್ಲ. ಗಂಗಾವತಿಯಿಂದ ನನ್ನನ್ನು ಜನ ಆಯ್ಕೆ ಮಾಡಿದರೆ ಇಡೀ ರಾಜ್ಯಕ್ಕೆ ನಾನು ಮಾದರಿಯಾಗಿ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಕಲ್ಯಾಣ ಕರ್ನಾಟಕ ಪಕ್ಷದ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ರಾಜ್ಯದ ಎಲ್ಲಾ ಭಾಗಗಳ, ಎಲ್ಲಾ ಸಮುದಾಯಗಳ ಮತ್ತು ಎಲ್ಲಾ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ. ನನಗೆ ಅಧಿಕಾರ ಸಿಕ್ಕರೆ ನಾನು ನೀಡಿದ ಪ್ರಣಾಳಿಕೆಯಲ್ಲಿನ ಪ್ರತಿಯೊಂದು ಅಂಶವನ್ನು ಈಡೇರಿಸುವುದಾಗಿ ಲಿಖಿತ ಪೂರ್ವಕ ಬರೆದುಕೊಡುತ್ತೇನೆ. ಜನ ಅಭಿವೃದ್ಧಿಯ ವಿಚಾರದಲ್ಲಿ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೋ ಅದನ್ನು ಮೀರಿ ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.