ಬಹುಭಾಷಾ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿಯನ್ನು ಪುತ್ರಿ ನಯಾಬ್ ಉದಾಸ್ ಖಚಿತಪಡಿಸಿದ್ದಾರೆ.
1980ರ ದಶಕದಲ್ಲಿ ಪಂಕಜ್ ಉದಾಸ್ ಅವರು ಗಝಲ್ ಗಾಯನದ ಮೂಲಕ ಫೇಮಸ್ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್ ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಅವರು ಧ್ವನಿ ನೀಡಿದ್ದರು. ಕಿಚ್ಚ ಸುದೀಪ್ ಅಭಿನಯದ ‘ಸ್ಪರ್ಶ’ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರನ್ನು ಅವರು ರಂಜಿಸಿದ್ದರು.
ಪಂಕಜ್ ಉದಾಸ್ ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ‘ಸ್ಪರ್ಶ’ ಸಿನಿಮಾದಲ್ಲಿನ ‘ಬರೆಯದ ಮೌನದ ಕವಿತೆ ಹಾಡಾಯಿತು..’, ‘ಚಂದಕಿಂತ ಚಂದ ನೀನೇ ಸುಂದರ..’ ಹಾಡುಗಳು ಪಂಕಜ್ ಉದಾಸ್ ಅವರ ಕಂಠದಲ್ಲಿ ಮೂಡಿಬಂದಿದ್ದವು. ಪಂಕಜ್ ಉದಾಸ್ ಅವರ ಅಗಲಿಕೆಗೆ ಕರುನಾಡಿನಲ್ಲಿನ ಅಭಿಮಾನಿಗಳು ಕೂಡ ಕಂಬನಿ ಮಿಡಿಯುತ್ತಿದ್ದಾರೆ.










