ವಿಜಯಪುರ : ಕೊರೊನಾ ಸೋಂಕಿನಿಂದ ಮೃತಪಟ್ಟ ಸೋಂಕಿತನ ಶವವನ್ನು ಬಾಕಿ ಬಿಲ್ ಪಾವತಿಸದೇ ಬಿಟ್ಟುಕೊಡುವುದಿಲ್ಲ ಎಂದ ಖಾಸಗಿ ಆಸ್ಪತ್ರೆ ವಿರುದ್ಧ ಮೃತನ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ನಗರದ ಬಂಜಾರಾ ಕ್ರಾಸ್ ಬಳಿಯಿರುವ ಕೋಟಿ ಆಸ್ಪತ್ರೆಯಲ್ಲಿ ನಡೆದಿದೆ. ಬೆಳಗಾವಿ ಮೂಲದ ರಾಜು ಭೋವಿ(40) ಎಂಬುವವರು ಕಳೆದ 16 ದಿನಗಳಿಂದ ಕೊರೊನಾ ಸೋಂಕಿಗೆ ನಗರದ ಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತ ಮೃತಪಟ್ಟಿದ್ದರು. ಮೃತ ಸೋಂಕಿತನ ಕುಟುಂಬಸ್ಥರು ಈಗಾಗಲೇ 4.87 ಲಕ್ಷ ರೂ. ಆಸ್ಪತ್ರೆ ಬಿಲ್‍ನ್ನು ಪಾವತಿಸಿ ಶವವನ್ನು ಕೊಡುವಂತೆ ಆಸ್ಪತ್ರೆಯಲ್ಲಿ ಕೇಳಿಕೊಂಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು ಬಾಕಿ ಉಳಿದ 3 ಲಕ್ಷ ರೂ ಬಿಲ್ ಪಾವತಿಸಿದ ಬಳಿಕ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆ ಮೃತ ಸೋಂಕಿತನ ಸಂಬಂಧಿಕರು ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಿನಲ್ಲಿ ಬಡ ಜನರಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೋಟಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ತಮಟೆ ಬಾರಿಸುವ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.










