ಬಿಗ್ ಬಾಸ್ ಮನೆಯಲ್ಲೇ ವರ್ತೂರು ಸಂತೋಷ್ ಅರೆಸ್ಟ್…

62
firstsuddi

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಎನ್ನುವವರನ್ನು ಬಂಧಿಸಲಾಗಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಆಗಿದ್ದಾರೆ.

ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ವರ್ತೂರು ಸಂತೋಷ್ ಬಂಧನವಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರೆಸ್ಟ್ ಮಾಡಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳಿಂದ ವರ್ತೂರು ಸಂತೋಷ್ ಬಂಧನವಾಗಿದ್ದು, ಸದ್ಯ ರಾಮೋಹಳ್ಳಿ ಅರಣ್ಯಾಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ.

ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.

ಈ ಕುರಿತು ದೂರು ನೀಡಿರುವ ಶರತ್ ಮಾಧ್ಯಮಗಳ ಜೊತೆ ಮಾತನಾಡಿ, ‘ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿಯುಗುರು ಇರುವ ಪದಕವನ್ನು ಅವರು ಧರಿಸಿದ್ದರು. ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ರೂಲ್ಸ್ ಪಾಲನೆ ಮಾಡಬೇಕು. ಈ ರೀತಿ ಹುಲಿಯುಗುರಿನ ಪದಕ ಧರಿಸೋದು ತಪ್ಪು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು’ ಎಂದರು.

ಬಿಗ್ ಬಾಸ್ ಮನೆಯಿಂದ ನಿನ್ನೆ ರಾತ್ರಿ ಬಂಧಿಸಿ ಕರೆದುಕೊಂಡು ಬಂದಿರುವ ವರ್ತೂರ್ ಸಂತೋಷ್ ಹಲವು ಮಾಹಿತಿಗಳನ್ನು ಅರಣ್ಯ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನುವ ಮಾಹಿತಿ ಇದೆ. ತನ್ನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂತೋಷ್ ಅವರು ಯಾರಿಂದ ಹುಲಿ ಉಗುರು ಪಡೆದುಕೊಂಡರು ಎನ್ನುವ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದು ನಾನ್ ಬೆಲ್ ಕೇಸ್ ಆಗಿರುವುದರಿಂದ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅವರನ್ನು ಪ್ರೊಡ್ಯೂಸ್ ಮಾಡಲಾಗುತ್ತೆ ಎಂದು ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.