ನವದೆಹಲಿ : ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಾರಿ ನಿರ್ದೇಶನಾಲಯ (ಇಡಿ) ಮುಖಾಂತರ ನನ್ನ ಮಗಳು, ಮೊಮ್ಮಗಳು ಮತ್ತು ಗರ್ಭಿಣಿಯಾದ ನನ್ನ ಸೊಸೆಗೆ ಕಿರುಕುಳ ನೀಡುತ್ತಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಲಾಲು ಪ್ರಸಾದ್ ಯಾದವ್, ಸಂಘ ಪರಿವಾರ (ಆರ್‌ಎಸ್‌ಎಸ್) ಮತ್ತು ಬಿಜೆಪಿ ವಿರುದ್ಧ ನನ್ನ ಸೈದ್ಧಾಂತಿಕ ಹೋರಾಟ ಹಿಂದೆಯೂ ಇತ್ತು ಮತ್ತು ಮುಂದುವರಿಯಲಿದೆ. ನಾನು ಅವರ ಮುಂದೆ ಎಂದಿಗೂ ತಲೆತಗ್ಗಿಸಿಲ್ಲ ಮತ್ತು ನಾನು ಮತ್ತು ನನ್ನ ಕುಟುಂಬದ ಯಾರೊಬ್ಬರೂ ನಿಮ್ಮ (ಬಿಜೆಪಿ) ರಾಜಕೀಯದ ಮುಂದೆ ತಲೆಬಾಗುವುದಿಲ್ಲ ಎಂದಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ನಾನು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೂ ನೋಡಿದ್ದೇನೆ. ಅದರ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಬಿಜೆಪಿಯ ಪ್ರಭಾವದಿಂದ ಇಡಿ ನನ್ನ ಪುತ್ರಿಯರು, ಚಿಕ್ಕ ಮೊಮ್ಮಕ್ಕಳು ಮತ್ತು ಗರ್ಭಿಣಿ ಸೊಸೆಯನ್ನು ಆಧಾರರಹಿತ ಮತ್ತು ಪ್ರತೀಕಾರದ ಪ್ರಕರಣಗಳಲ್ಲಿ 15 ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದೆ. ನನ್ನ ವಿರುದ್ಧ ರಾಜಕೀಯ ಹೋರಾಟ ನಡೆಸಲು ಬಿಜೆಪಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರ ಮೂವರು ಪುತ್ರಿಯರು ಹಾಗೂ ಆರ್ ಜೆಡಿ ನಾಯಕರ ಸ್ಥಳಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಹಾರದ ಪಾಟ್ನಾ, ದೆಹಲಿ, ರಾಂಚಿ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಇಡಿ ಶೋಧ ಕಾರ್ಯ ನಡೆಸಿತ್ತು.










