ಭೋಪಾಲ್ : ಮಹಿಳಾ ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್ ನುಗ್ಗಿಸಿ ನೆಲಸಮಗೊಳಿಸಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ನಡೆದಿದೆ.
ತಂಡದ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರು, ಅತ್ಯಾಚಾರ ಘೋರ ಅಪರಾಧ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಅತ್ಯಾಚಾರದಂತಹ ಅಪರಾಧಗಳು ಇಂತಹ ಶಿಕ್ಷೆಗೆ ಅರ್ಹವಾಗಿವೆ ಎಂದು ಹೇಳಿದ್ದಾರೆ.
ರಾಜಧಾನಿ ಭೋಪಾಲ್ ನಿಂದ ಸುಮಾರು 250 ಕಿಮೀ ದೂರದಲ್ಲಿರುವ ದಾಮೋಹ್ ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. 4ನೇ ಆರೋಪಿ ಕೌಶಲ್ ಕಿಶೋರ್ ಚೌಬೆ ಎಂಬಾತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರಿಂದ ಅದನ್ನು ಕೆಡವಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ತೊಡಗುವವರಲ್ಲಿ ಭಯ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಿತಾ ಕುರ್ಮಿ ತಿಳಿಸಿದ್ದಾರೆ.










