ಮೈಸೂರು : ಪರಿಶಿಷ್ಠ ಪಂಗಡಕ್ಕೆ ಶೇ.7 ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಶ್ರೀ ರಾಮುಲು ಅವರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಪಾಪ ನನ್ನ ವಿರುದ್ಧ ಸೋತಿರುವುದರಿಂದ ಈ ರೀತಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಆಗಲೇ ರಾಜಿನಾಮೆ ನೀಡಬೇಕಿತ್ತು. ಶ್ರೀ ರಾಮುಲು ಅವರನ್ನು ಡಿಸಿಎಂ ಮಾಡುತ್ತೇವೆ ಎಂದು ಪ್ರಚಾರ ಮಾಡಿದರು. ಆದರೆ ಡಿಸಿಎಂ ಮಾಡಿದ್ದಾರ? ಶಾಸಕರಲ್ಲದವರನ್ನು ಡಿಸಿಎಂ ಮಾಡಿದ್ದಾರೆ. ಪರಿಶಿಷ್ಠ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ನೀಡದೇ ಇದ್ದರೆ ಒಂದು ನಿಮಿಷ ಇರುವುದಿಲ್ಲ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಏನಾಯಿತು? ಎಂದು ಪ್ರಶ್ನಿಸಿದರು.
“ಪಾಪ ಶ್ರೀ ರಾಮುಲು ಬಗ್ಗೆ ಏನು ಮಾತನಾಡುವುದು. ಸ್ವಾರ್ಥ ಬುದ್ದಿ ತೋರಿಸುವವರೆಲ್ಲಾ ಒಂದೆಡೆ ಸೇರಿಕೊಂಡಿದ್ದಾರೆ. ಮೌಲ್ಯ ಸಿದ್ದಾಂತ ಏನೂ ಇಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಪರ ಜನ ಇಲ್ಲ. ಹೀಗಾಗಿ ಹಣದ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ. 30 ಸಾವಿರ ಸೀರೆಗಳು ಸಿಕ್ಕಿದ್ದವು. ಅದು ಯಾರದ್ದು? ಅದು ಎಲ್ಲಿಂದ ಬಂದು, ಯಾರ ದುಡ್ಡು, ಅವೆಲ್ಲಾ ಅಕ್ರಮ ಅಲ್ಲವೇ? ಕಾನೂನಿನ ಪ್ರಕಾರ ಸೀರೆ ಹಂಚಲು ಅವಕಾಶ ಇದೆಯೇ? ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.










