ನವದೆಹಲಿ : 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಸಾಮಾಜಿಕ ಮಾಧ್ಯಮ ಲಿಂಕ್ ಗಳನ್ನು ನಿಷೇಧಿಸುವ ಆದೇಶದ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ.ಎಂ ಸುಂದ್ರೇಶ್ ಅವರ ದ್ವಿಸದಸ್ಯ ಪೀಠ ಯಾವುದೇ ಮಧ್ಯಂತರ ಆದೇಶ ನೀಡದೇ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್ ಗೆ ಮುಂದೂಡಿತು.
2002ರ ಗುಜರಾತ್ ಗಲಭೆಗೆ ಸಂಬಂಧಿಸಿದ `ಇಂಡಿಯಾ: ದಿ ಮೋದಿ ಕ್ವಶ್ಚನ್’ ಎಂಬ ಶೀರ್ಷಿಕೆಯ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ವಕೀಲ ಎಂ.ಎಲ್ ಶರ್ಮಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಪತ್ರಕರ್ತ ಎನ್. ರಾಮ್ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ನಾವು ನೋಟಿಸ್ ಗಳನ್ನು ನೀಡುತ್ತಿದ್ದೇವೆ. ಮೂರು ವಾರಗಳಲ್ಲಿ ಪ್ರತಿವಾದ ಅಫಿಡವಿಟ್ ಸಲ್ಲಿಸಬೇಕು. ಅದರ ನಂತರ ಎರಡು ವಾರಗಳಲ್ಲಿ ಮರುಪರಿಶೀಲನೆ ಮಾಡಲಾಗುವುದು ಎಂದು ಪೀಠ ಹೇಳಿದೆ.










