ಶ್ರೀನಗರ: ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಸ್ತ್ರ ಸಂಹಿತೆ ನಿಯಮಗಳ ಪ್ರಕಾರ ಮಹಿಳಾ ವಕೀಲರು ಬುರ್ಖಾ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಆದೇಶಿಸಿದೆ. ಡಿಸೆಂಬರ್ 13 ರಂದು ಸೈಯದ್ ಐನೈನ್ ಖಾದ್ರಿ ಎಂದು ಪರಿಚಯಿಸಿಕೊಂಡ ಮಹಿಳಾ ವಕೀಲರೊಬ್ಬರು ಮುಖವನ್ನು ಮುಚ್ಚಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಲು ಹಾಜರಾಗಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ, ಬುರ್ಖಾ ಧರಿಸಿ ನ್ಯಾಯಾಲಯದಲ್ಲಿ ಹಾಜರಾಗುವಂತಿಲ್ಲ ಎಂದು ಹೇಳಿತು. ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಜ್ಮಿ ಅವರು ಡಿಸೆಂಬರ್ 13 ರ ಆದೇಶದಲ್ಲಿ ಅವಲೋಕನಗಳನ್ನು ಮಾಡುವಾಗ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಡಿಯಲ್ಲಿ ನಿಬಂಧನೆಗಳನ್ನು ಉಲ್ಲೇಖಿಸಿದ್ದಾರೆ. ಈ ಆದೇಶವು ನವೆಂಬರ್ 27 ರಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು, ಸೈಯದ್ ಐನೈನ್ ಖಾದ್ರಿ ಎಂಬ ಮಹಿಳೆ ತನ್ನನ್ನು ತಾನು ವಕೀಲೆ ಎಂದು ಗುರುತಿಸಿಕೊಂಡ ಘಟನೆಗೆ ನಡೆದಿದೆ. ಮುಖ ಮುಚ್ಚಿಕೊಂಡು ಕಾಣಿಸಿಕೊಳ್ಳುವುದು ತನ್ನ ಹಕ್ಕು ಎಂದು ಮಹಿಳೆ ಹೇಳಿಕೊಂಡಿದ್ದು, ಮುಸುಕು ತೆಗೆಯುವಂತೆ ನ್ಯಾಯಾಲಯವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಾಂಸಾರಿಕ ಹಿಂಸಾಚಾರದ ದೂರು ರದ್ದುಗೊಳಿಸುವಂತೆ ಕೋರಿದ ಪ್ರಕರಣದಲ್ಲಿ ತಾನು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಬುರ್ಖಾ ತೆಗೆದು ವಾದ ಮಂಡಿಸುವಂತೆ ನ್ಯಾಯಮೂರ್ತಿ ರಾಹುಲ್ ಭಾರತಿ ಸೂಚಿಸಿದಾಗ, ಅದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಬುರ್ಖಾ ತೆಗೆಯಲು ನಿರಾಕರಿಸಿದ್ದರು. ಹೀಗಾಗಿ ಮಹಿಳಾ ವಕೀಲರ ಗುರುತು ಪರಿಚಯವನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗದೆ ಇದ್ದರಿಂದ ನ್ಯಾಯಾಲಯ ಆಕೆ ವಾದ ಮಂಡನೆ ಮಾಡದಂತೆ ನಿಬರ್ಂಧಿಸಿತು. ವ್ಯಕ್ತಿಯಾಗಿ ಮತ್ತು ವೃತ್ತಿಪರವಾಗಿ ಅವರ ನಿಜವಾದ ಗುರುತನ್ನು ದೃಢೀಕರಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಾಗದಿರುವುದರಿಂದ ತನ್ನನ್ನು ವಕೀಲೆ ಸೈಯದ್ ಐನೈನ್ ಖಾದ್ರಿ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯು ಅರ್ಜಿದಾರರ ವಕೀಲರೆಂದು ಈ ನ್ಯಾಯಾಲಯವು ಪರಿಗಣಿಸುವುದಿಲ್ಲ.” ಎಂದು ನ್ಯಾಯಮೂರ್ತಿ ಭಾರತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.










