ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ವಾಯ್ಸ್ ನಲ್ಲಿ ನಟ ಧರ್ಮೇಂದ್ರ ಮಿಮಿಕ್ರಿ – ಸುಮಾರು 15 ಕೆಜಿ ಚಿನ್ನಾಭರಣ ಖರೀದಿಸಿ ಮಹಿಳೆಯಿಂದ ವಂಚನೆ.

36

ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ರವರ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಘಟನೆ ಆರ್‍ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಐಶ್ವರ್ಯ ಗೌಡ, ನಟ ಧರ್ಮೇಂದ್ರ ಹಾಗೂ ಹರೀಶ್ ಎಂಬುವವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಐಶ್ವರ್ಯ ಗೌಡ ವಾರಾಹಿ ವಲ್ರ್ಡ್ ಆಫ್ ಗೋಲ್ಡ್ ಶಾಪ್‍ನಿಂದ 11 ಬಾರಿ ಚಿನ್ನವನ್ನು ಖರೀದಿಸಿ ವಂಚಿಸಿದ್ದಾರೆ. ಈ ಸಂಬಂಧ ಚಿನ್ನದಂಗಡಿ ಮಾಲೀಕರಾದ ವನಿತಾ ಐತಾಳ್ ಅವರು ದೂರು ನೀಡಿದ್ದು, ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಾರೆ. ಹಣ ಕೊಡದೇ ಇದ್ದಾಗ, ಡಿ.ಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದರು. ಧಮೇರ್ಂದ್ರ ರವರು ಡಿ.ಕೆ ಸುರೇಶ್ ವಾಯ್ಸ್‍ನಲ್ಲಿ ಕರೆ ಮಾಡಿದ್ದರು. ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‍ಗೆ ಕರೆ ಮಾಡಿ ಸಮಯ ಕೇಳಿದ್ದರು. ಕೊನೆಗೆ ತಾನೇ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಎಂದು ವನಿತಾ ಆರ್‍ಆರ್‍ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವನಿತಾ ಐತಾಳ್ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.