ಬೆಂಗಳೂರಿನಲ್ಲಿ ಕ್ರಿಕೆಟ್ ಅಂಗಣದಲ್ಲೇ ಕುಸಿದ್ದು ಬಿದ್ದು ಕಾಪು ಮೂಲದ ಯುವ ಆಟಗಾರ ಸಾವು…

201
firstsuddi

ಬೆಂಗಳೂರು: ರಾಜ್ಯಮಟ್ಟದ ಪ್ರಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರ ಆಟವಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ತುಮಕೂರಿನ ಕ್ರಿಕೆಟ್ ಅಂಗಣದಲ್ಲಿ ಶುಕ್ರವಾರ ಸಂಭವಿಸಿದೆ. ಮೃತ ಯುವಕನನ್ನು ಕಾಪು ಸಮೀಪದ ಪಾಂಗಾಳ ಗಾಂಧಿನಗರ ಸರಸ್ವತಿ ಕಾಲನಿ ನಿವಾಸಿ ಪ್ರಶಾಂತ್ ಕುಮಾರ್ (32) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಪ್ರಶಾಂತ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಹವ್ಯಾಸಿ ಕ್ರಿಕೆಟ್ ಆಟಗಾರನಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಂಡಗಳ ಮೂಲಕ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದರು ಎನ್ನಲಾಗಿದೆ. ತನ್ನ ವಿಶಿಷ್ಟ ಶೈಲಿಯ ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್ ಮೂಲಕ ಆಲ್ ರೌಂಡರ್ ಆಟಗಾರನಾಗಿದ್ದ ಪ್ರಶಾಂತ್ ಶುಕ್ರವಾರದ ಪಂದ್ಯದಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದರು. ಆ ಬಳಿಕ ನೀರು ಕುಡಿದಿದ್ದು, ಮರುಕ್ಷಣದಲ್ಲಿ ಕುಸಿದು ಬಿದ್ದಿದ್ದರು ತತ್ ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮೃತ ಪ್ರಶಾಂತ್ ತಾಯಿ, ಪತ್ನಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.