ಬೆಂಗಳೂರು : ಬನ್ನೇರುಘಟ್ಟ ಸಮೀಪದ ಎಎಂಸಿ ಕಾಲೇಜಿನ ಹಾಸ್ಟೆಲ್ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೇರಳ ಮೂಲದ 19 ವರ್ಷದ ನಿತಿನ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಎಎಂಸಿ ಇಂಜಿನಿಯರಿಂಗ್ ಕಾಲೇಜಿಗೆ ಇದೇ ತಿಂಗಳು ಡಿಸೆಂಬರ್ 1 ಕ್ಕೆ ಕಾಲೇಜು ಸೇರಿದ್ದ. ಸಿಇಎಸ್ ಪ್ರಥಮ ವರ್ಷಕ್ಕೆ ಅಡ್ಮಿಶನ್ ಆಗಿದ್ದ. ಚಾಕುವಿನಿಂದ ತಾನೇ ಚುಚ್ಚಿಕೊಂಡು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾಲೇಜ್ ಕ್ಯಾಂಪಸ್ ಒಳಗಿನ ಹಾಸ್ಟೆಲ್ ನಲ್ಲಿ ವಾಸವಿದ್ದ ನಿತಿನ್ ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ ಸಹಪಾಠಿ ಬಂದು ಬಾಗಿಲು ಬಡಿದಿದ್ದ. ಬಾಗಿಲು ತೆಗೆಯದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಗೆ ವಿಷಯ ತಿಳಿಸಿದ್ದಾನೆ.
ಕೂಡಲೇ ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದಿದ್ದಾರೆ. ಆಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶೌಚಾಲಯದಲ್ಲಿ ನಿತಿನ್ ಶವವಾಗಿ ಪತ್ತೆಯಾಗಿದ್ದಾನೆ. ತಂದೆ ತಾಯಿಯ ಪ್ರೀತಿಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










