ಬೆಳಗಾವಿ: ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ನಗರ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದು, ರಾಜ್ಯ ಸರ್ಕಾರ ಹಾಗೂ ಬೆಳಗಾವಿ ಪೊಲೀಸರ ನಡೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕನ್ನಡಪರ ಹೋರಾಟಗಾರರಾದ ಸಂಪತ್ ಕುಮಾರ್ ದೇಸಾಯಿ ಹಾಗೂ ಅನಿಲ್ ದಡ್ಡಿಮನಿ ವಿರುದ್ಧ ರೌಡಿಶೀಟ್ ಓಪನ್ ಮಾಡಲಾಗಿದೆ. ಕಳೆದ 2021ರ ಡಿಸೆಂಬರ್ ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್ ಗೆ ನುಗ್ಗಿ ಎಂಇಎಸ್ ಮುಖಂಡ ದೀಪಕ್ ದಳವಿಯ ಮೇಲೆ ಈ ಇಬ್ಬರು ಕನ್ನಡಿಗ ಯುವಕರು ಮಸಿ ಬಳಿದಿದ್ದರು. ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಾದ ನಂತರ ಜೈಲು ಸೇರಿ ಬಿಡುಗಡೆಯಾಗಿದ್ದರು.
ಇದೀಗ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿ ಮಾಡಿರುವ ನೋಟಿಸ್ ನೋಡಿ ಕನ್ನಡಪರ ಹೋರಾಟಗಾರರಿಗೆ ಶಾಕ್ ಆಗಿದ್ದು, ನಗರದ ಟಿಳಕವಾಡಿ ಪೊಲೀಸ್ ಠಾಣೆಯಿಂದ ಅನಿಲ್ ದಡ್ಡಿಮನಿಗೆ ಕಾರಣ ಕೇಳಿ ನೋಟಿಸ್ ನೀಡಿದರೆ, ಎಪಿಎಂಸಿ ಠಾಣೆಯಿಂದ ಸಂಪತ್ ಕುಮಾರ್ ದೇಸಾಯಿಗೆ ಕಾರಣ ಕೇಳಿ ಎಂದು ನೋಟಿಸ್ ನೀಡಲಾಗಿದೆ.
ಚುನಾವಣೆ ವೇಳೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಚ್ಚಳಿಕೆ ನೀಡುವಂತೆ ನೋಟಿಸ್ ಕೊಡಲಾಗಿದೆ. 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಷ್ಟೇ ಮೊತ್ತದ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ನೋಟಿಸ್ ನೀಡಲಾಗಿದೆ.










